ಉಡುಪಿ: ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಕಳೆದ 14 ವರ್ಷಗಳಿಂದ ವಿವಿಧ ವೇಷ ಧರಿಸಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ಸಮಾಜಸೇವಕ ರವಿ ಕಟಪಾಡಿ ಹಾಗೂ ಅವರ ತಂಡ, ಈ ಬಾರಿ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲು ನಿರ್ಧರಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರವಿ ಕಟಪಾಡಿ, ‘ಕಳೆದ 10 ವರ್ಷಗಳಲ್ಲಿ ನಮ್ಮ ತಂಡವು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಒಟ್ಟು ₹1.85 ಕೋಟಿ ಹಣವನ್ನು 204 ಅನಾರೋಗ್ಯ ಪೀಡಿತ ಮಕ್ಕಳಿಗೆ ಹಸ್ತಾಂತರಿಸಿ, ಅವರ ಚಿಕಿತ್ಸೆಗೆ ನೆರವು ನೀಡಲಾಗಿದೆ’ ಎಂದು ತಿಳಿಸಿದರು.
ಕಳೆದ 14 ವರ್ಷಗಳಿಂದ ಈ ಸೇವಾ ಕಾರ್ಯ ಮುಂದುವರಿಸಿಕೊಂಡು ಬಂದಿದ್ದು, ಈ ಬಾರಿ 15ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ವೇಷ ಧರಿಸಲಾಗುವುದು. ಇದೇ ತಮ್ಮ ಹಾಗೂ ತಂಡದ ಸದಸ್ಯರ ಕೊನೆಯ ಜನ್ಮಾಷ್ಟಮಿ ವೇಷವಾಗಿದ್ದು, ಇನ್ನು ಮುಂದೆ ಅಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದಿಲ್ಲ ಎಂದು ಅವರು ಹೇಳಿದರು.
ಸೆಪ್ಟೆಂಬರ್ 4 ಮತ್ತು 5ರಂದು ಅಷ್ಟಮಿ ಪ್ರಯುಕ್ತ ಸಮುದ್ರ ಜೀವಿಯೊಂದರ ವಿಶಿಷ್ಟ ವೇಷ ಧರಿಸಿ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಲಾಗುವುದು. ಈ ಬಾರಿ ಸಂಗ್ರಹವಾಗುವ ಸಂಪೂರ್ಣ ಮೊತ್ತವನ್ನು ಕ್ಯಾನ್ಸರ್ ಪೀಡಿತ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ಚಿಕಿತ್ಸೆಗೆ ನೆರವಾಗುವ ಈ ಮಾನವೀಯ ಸೇವಾ ಕಾರ್ಯಕ್ಕೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಬೇಕು ಎಂದು ರವಿ ಕಟಪಾಡಿ ಮನವಿ ಮಾಡಿದರು.















