ಬಿಜೆಪಿ ಬಹುಮತ ಪಡೆಯಲು ರಥಯಾತ್ರೆ ನೆರವು: ಈಶ್ವರಪ್ಪ

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರಕಾರ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ನಡೆಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.

ಉಡುಪಿ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿಯಾಗಿ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಹಿಂದೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದ ಪರಿಸ್ಥಿತಿ ಇತ್ತು. ಈಗ ಪ್ರತಿ ಕ್ಷೇತ್ರಕ್ಕೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇದು ಪಕ್ಷದ ಸದೃಢತೆ ಮತ್ತು ಬೆಳವಣಿಗೆಗೆ ಸ್ಪಷ್ಟ ಉದಾಹರಣೆ ಎಂದು ಅಭಿಪ್ರಾಯಪಟ್ಟರು.

ಹಿಂದೆ ಪಕ್ಷಕ್ಕೆ ಜನರು ಪೂರ್ಣ ಬಹುಮತ ಕೊಟ್ಟಿರಲಿಲ್ಲ. ಈ ಬಾರಿ ಸಂಪೂರ್ಣ ಬಹುಮತ ಪಡೆಯಲು ರಥಯಾತ್ರೆ ನೆರವಾಗಲಿದೆ ಎಂದು ನುಡಿದರು.

ಕೇಂದ್ರದಲ್ಲಿ ವಿಶ್ವನಾಯಕ ಮೋದಿಜಿ ಮತ್ತಿತರ ನಾಯಕರ ನೇತೃತ್ವ, ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳಿನ್‍ಕುಮಾರ್ ಕಟೀಲ್ ಅವರ ಮೂಲಕ ಬಿಜೆಪಿ ನೇತೃತ್ವವನ್ನು ಜನತೆ ಗಮನಿಸಿದ್ದಾರೆ ಎಂದು ತಿಳಿಸಿದರು.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಲಿದ್ದೇವೆ. ಕಾಂಗ್ರೆಸ್ಸಿನ ಭ್ರಷ್ಟಾಚಾರದ ಜನರ ಮುಂದಿಡುವುದು ಬಿಜೆಪಿ ಗೆಲುವಿಗೆ ನೆರವಾಗಲಿದೆ ಎಂದರು.

ತಿಹಾರ್ ಜೈಲಿಗೆ ಹೋಗಿ ಬಂದ ಡಿ.ಕೆ. ಶಿವಕುಮಾರ್, ರೀಡೂ ಮೂಲಕ ಸಿದ್ದರಾಮಯ್ಯರ ಭ್ರಷ್ಟ ಆಡಳಿತ ಸೇರಿದಂತೆ ಕಾಂಗ್ರೆಸ್ ವೈಫಲ್ಯವನ್ನು ಜನರಿಗೆ ತಿಳಿಸಲಿದ್ದೇವೆ ಎಂದು ಅವರು ತಿಳಿಸಿದರು.

ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಖಾತೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಮಂಗಳೂರು ವಿಭಾಗ ಪ್ರಭಾರಿ ಹಾಗೂ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಎ. ಸುವರ್ಣ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ವಿಜಯ ಸಂಕಲ್ಪ ಯಾತ್ರೆ ರಾಜ್ಯ ಸಹ ಸಂಚಾಲಕರಾದ ದತ್ತಾತ್ರಿ ಎಸ್. ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಮುಂತಾದವರು ಉಪಸ್ಥಿತರಿದ್ದರು.

ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದ ಬೈಕ್ ರ್ಯಾಲಿ ಹಾಗೂ ಜಿಲ್ಲೆಯ ವಿವಿಧೆಡೆ ನಡೆದ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಪಕ್ಷದ ಹಿರಿಯ ಮುಖಂಡ ಕೀರ್ತಿಶೇಷ ಡಾ! ವಿ.ಎಸ್ .ಆಚಾರ್ಯ ಅವರ ಪ್ರತಿಮೆಗೆ ಪಕ್ಷದ ಮುಖಂಡರು ಮಾಲಾರ್ಪಣೆ ಮಾಡಿದರು.