ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿಯಾಯ್ತು ಅಪರೂಪದ ಶಸ್ತ್ರಚಿಕಿತ್ಸೆ: ಮೂತ್ರಪಿಂಡದಿಂದ ಹೃದಯದವರೆಗೆ ಹರಡಿದ್ದ ಕ್ಯಾನ್ಸರ್ ಗೆಡ್ಡೆ ತೆರವು: ತಜ್ಞವೈದ್ಯರ ಅಪರೂಪದ ಸಾಧನೆಯಿದು

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ, ಶಿವಮೊಗ್ಗದ 63 ವರ್ಷದ ವ್ಯಕ್ತಿಗೆ ಹೊಸ ಜೀವ ನೀಡಿದ್ದಾರೆ.

ರೋಗಿಯ ಎಡ ಮೂತ್ರಪಿಂಡದಲ್ಲಿ ಉಂಟಾಗಿದ್ದ ಕ್ಯಾನ್ಸರ್ ಗೆಡ್ಡೆ ದೇಹದ ಪ್ರಮುಖ ರಕ್ತನಾಳವಾದ ಇನ್ಫೀರಿಯರ್ ವೆನಾ ಕ್ಯಾವಾ (IVC) ಮೂಲಕ ಹೃದಯದ ಬಲ ಹೃತ್ಕರ್ಣದವರೆಗೆ ಹರಡಿದ್ದು, ಸುಮಾರು 12 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಅದನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.

ರೋಗಿಯು ಒಂದು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ತಪಾಸಣೆಯಲ್ಲಿ ಎಡ ಮೂತ್ರಪಿಂಡದಲ್ಲಿ ದೊಡ್ಡ ಗಾತ್ರದ ಕ್ಯಾನ್ಸರ್ ಗೆಡ್ಡೆ ಇರುವುದು ಹಾಗೂ ಅದು ಹೃದಯದವರೆಗೆ ವಿಸ್ತರಿಸಿರುವುದು ಪತ್ತೆಯಾಗಿತ್ತು.

ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು.ಡಾ. ಅರುಣ್ ಚಾವ್ಲಾ ಅವರ ನೇತೃತ್ವದ ಮೂತ್ರಶಾಸ್ತ್ರ ತಂಡ ಮತ್ತು ಡಾ. ಶ್ಯಾಮ್ ಕೆ. ಅಶೋಕ್ ಹಾಗೂ ಡಾ. ಗಣೇಶ್ ಕಾಮತ್ ಅವರ ನೇತೃತ್ವದ ಹೃದಯ, ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಾ (CTVS) ತಂಡ ಜಂಟಿಯಾಗಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿತು.

ಹೃದಯ-ಶ್ವಾಸಕೋಶ ಯಂತ್ರದ ನೆರವಿನಿಂದ ರೋಗಿಯ ರಕ್ತಪರಿಚಲನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಹೃದಯ ಹಾಗೂ ಪ್ರಮುಖ ರಕ್ತನಾಳದಿಂದ ಗೆಡ್ಡೆಯನ್ನು ಒಂದೇ ತುಂಡಿನಲ್ಲಿ ಯಶಸ್ವಿಯಾಗಿ ಹೊರತೆಗೆಯಲಾಯಿತು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯನ್ನು ಐಸಿಯುನಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದ್ದು, ಬಳಿಕ ಅವರು ಚೇತರಿಸಿಕೊಂಡು ಮೂರು ದಿನಗಳಲ್ಲೇ ನಡೆಯಲು ಆರಂಭಿಸಿದರು. ಸುಮಾರು ಎರಡು ವಾರಗಳ ಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ವೈದ್ಯರ ಸಲಹೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಶಸ್ತ್ರಚಿಕಿತ್ಸೆಯಲ್ಲಿ ಅರಿವಳಿಕೆ, ಪರ್ಫ್ಯೂಷನ್, ಕ್ರಿಟಿಕಲ್ ಕೇರ್ ಹಾಗೂ ಅಂತಃಸ್ರಾವಶಾಸ್ತ್ರ ವಿಭಾಗಗಳ ತಜ್ಞರೂ ಮಹತ್ವದ ಪಾತ್ರವಹಿಸಿದ್ದರು.

ಮೂತ್ರಪಿಂಡದ ಕ್ಯಾನ್ಸರ್ ಹೃದಯದವರೆಗೆ ಹರಡಿದಂತಹ ಅಪರೂಪದ ಪ್ರಕರಣಗಳಲ್ಲಿ ವಿವಿಧ ವಿಭಾಗಗಳ ವೈದ್ಯರ ಸಮನ್ವಯ ಮತ್ತು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೇ ಯಶಸ್ಸಿಗೆ ಕಾರಣವಾಗಿವೆ ಎಂದು ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಚಾವ್ಲಾ ತಿಳಿಸಿದ್ದಾರೆ.

ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಡಾ. ಸುಧಾಕರ್ ಕಂಟಿಪುಡಿ, ಅತ್ಯಂತ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ವಿಶ್ವಮಟ್ಟದ ಚಿಕಿತ್ಸೆ ನೀಡುವ ಬದ್ಧತೆಯನ್ನು ಕಸ್ತೂರ್ಬಾ ಆಸ್ಪತ್ರೆ ಮುಂದುವರಿಸಲಿದೆ ಎಂದು ಹೇಳಿದ್ದಾರೆ.