ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಕೇಸ್ಗಳ ಪೈಕಿ, ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ಶುಕ್ರವಾರ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಇದ್ದ ಪೀಠ ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದರು.
ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಹೇಳಿದ್ದು, ನಾಳೆ(ಆ.02) 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಲಿದೆ.ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು.
ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪದೇಪದೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. 2021ರ ಸುಮಾರಿಗೆ ಕೋವಿಡ್-ಲಾಕ್ ಡೌನ್ ಮಧ್ಯೆ ಇಂತಹ ಮೊದಲ ಘಟನೆ ನಡೆದಿತ್ತು ಎಂದು ವರದಿ ಆಗಿದೆ.
2024ರ ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಆರಂಭವಾಗುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ವೈರಲ್ ಆಗಿದ್ದವು. ಹಲವಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ 2,900 ಕ್ಕೂ ಹೆಚ್ಚು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.












