ದಾವಣಗೆರೆ: 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾದ ಆರೋಪಿ; 24 ಗಂಟೆಗಳಲ್ಲಿ ಮರು ಬಂಧಿಸಿದ ಪೊಲೀಸರು!

ದಾವಣಗೆರೆ: ಕೈದಿಯೊಬ್ಬ 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಕಾರಾಗೃಹದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರೋಪಿಯನ್ನು ವಸಂತ್ (23) ಎಂದು ಗುರುತಿಸಲಾಗಿದ್ದು, ಅತ್ಯಾಚಾರದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಆತನನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆಗಸ್ಟ್ 25ರಂದು ಉಪ- ಜೈಲಿನ 40 ಅಡಿ ಎತ್ತರದ ಗೋಡೆಯಿಂದ ವಸಂತ್ ಜಿಗಿದಿದ್ದಾನೆ. ತಪ್ಪಿಸಿಕೊಳ್ಳುವ ಸಮಯದಲ್ಲಿ ಆತನ ಬಲಗಾಲಿಗೆ ಗಂಭೀರ ಗಾಯದ ಹೊರತಾಗಿಯೂ, ಆತ ಜೈಲಿನ ಆವರಣದಿಂದ ತಪ್ಪಿಸಿಕೊಂಡಿದ್ದಾನೆ.

ಸುದ್ದಿ ತಿಳಿದ ಕೂಡಲೇ ಜೈಲು ಅಧಿಕಾರಿಗಳು ಮತ್ತು ಸ್ಥಳೀಯ ಪೋಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ ಮತ್ತು ಪರಾರಿ ವಸಂತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸಮೀಪದ ಹಾವೇರಿ ಜಿಲ್ಲೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಮತ್ತು 24 ಗಂಟೆಗಳ ಒಳಗೆ ಮತ್ತೆ ಬಂಧಿಸಲಾಗಿದೆ.