♠ ರಂಜಿತ್ ಸಸಿಹಿತ್ಲು
ಈ ಕೊರೋನಾ ಎನ್ನುವ ಮಹಾಮಾರಿ ಇದೆಯಲ್ವಾ ವಿಶ್ವದ ಅದೆಷ್ಟೋ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂಡಿಹಿಪ್ಪೆಕಾಯಿ ಮಾಡಿದೆ. ಅದೆಷ್ಟೋ ಜನರ ಉಸಿರನ್ನೇ ಹೀರಿ ಬಿಟ್ಟಿದೆ. ವಾಣಿಜ್ಯ ವ್ಯವಹಾರ ಶೈಕ್ಷಣಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ.
ಇದೆಲ್ಲದರ ನಡುವೆಯೂ ಪ್ರತಿಯೊಂದು ಒಳ್ಳೆಯದರಲ್ಲೂ ಕೆಟ್ಟದು, ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯ ಸಂಗತಿಗಳು ಇರುತ್ತೆ ಅನ್ನುತ್ತಾರಲ್ಲ ಹಾಗೆಯೇ ಈ ಕೊರೊನದಿಂದಲೂ ಕೆಲವೊಂದು ಒಳ್ಳೆಯ ಬೆಳವಣಿಗೆಗಳೇ ಆಯಿತೇನೋ ಅನ್ನಿಸುತ್ತಿದೆ.
ಮನುಷ್ಯ ಭೂಮಿ ಮೇಲಿರುವ ಅತ್ಯಂತ ಕ್ರೀಯಾಶೀಲ ಪ್ರಾಣಿ,ತನ್ನ ಔದ್ಯೋಗಿಕ ಕೆಲಸ ಕಾರ್ಯದಲ್ಲಿ ಮಗ್ನನಾಗಿರುವ ಅವನಿಗೆ ತನ್ನ ಕುಟುಂಬದೆಡೆಗೆ ಸಮಯ ನೀಡಲಾಗುತ್ತಿರಲಿಲ್ಲ. ಆದರೆ ಈಗ ಮನೆಬಿಟ್ಟು ಆರಾಮಾಗಿ ಹೊರಗೆ ಬರಲಾಗದ ಪರಿಸ್ಥಿತಿ. ಇನ್ನು ಈ ನಗರಗಳೆಲ್ಲವೂ ವಾಹನ ದಟ್ಟಣೆಯಿಂದ ಯಾವಾಗಲೂ ಗಿಜಿಗುಡುತ್ತಿದ್ದು ಶಬ್ದ, ವಾಯುಮಾಲಿನ್ಯದಿಂದ ಈಗ ಸ್ವಲ್ಪ ವಿಶ್ರಾಂತಿ ಪಡೆದಂತಾಗಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ದೇಶದಲ್ಲಿ ವಾಯು ಮಾಲಿನ್ಯ ಜಲ ಮಾಲಿನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆಯಂತೆ, ಕಾರಣ ಕಾರ್ಖಾನೆಗಳು ಸ್ತಬ್ದವಾಗಿರೋದು.
ಇಟಲಿಯ ನದಿಯೊಂದರಲ್ಲಿ ಅನೇಕ ವರ್ಷಗಳಿಂದ ಜಲಮಾಲಿನ್ಯದಿಂದ ಮರೆಯಾಗಿದ್ದ ಡಾಲ್ಫಿನ್ ಗಳು ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆಯಂತೆ. ಇತ್ತಿಚೆಗೆ ಬಂದ ವರದಿಯ ಪ್ರಕಾರ ಬೆಂಗಳೂರಿನ ಎನ್ವಿರಾನ್ಮೆಂಟ್ ಇಂಡೆಕ್ಸ್ ನಲ್ಲಿ 51 ಅಂಕ ದಾಖಲಾಗಿದ್ದು , ಬೆಂಗಳೂರು ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಜಾಸ್ತಿಯಾಗಿರುವುದು ಉತ್ತಮ ಬೆಳವಣಿಗೆಯೇ ಅಲ್ಲವೇ?
ಅದೇನೇ ಇರಲಿ ಜಗತ್ತು ಕೊರೋನಾದ ಕಬಂಧಬಾಹುವಿನಿಂದ ಹೊರಬಂದು ಮತ್ತೆ ಸಂತೋಷ ನೆಮ್ಮದಿ ಆರೊಗ್ಯ ಶಾಂತಿ ನೆಲೆಸಲಿ, ನಮ್ಮ ಸುತ್ತಲಿನ ಪರಿಸರ ಹೀಗೇ ತುಂಬಿಕೊಂಡಿರಲಿ ಎನ್ನುವುದು ನನ್ನ ಆಶಯ.