ಇವರು ರಂಗು ರಂಗಿನ ರಂಗವಲ್ಲಿ ಅರಳಿಸ್ತಾರೆ: ರಂಗೋಲಿಯಲ್ಲೇ ಬದುಕು ಕಟ್ಟಿಕೊಂಡ ಮೂಡಬಿದ್ರೆಯ ಯುವ ಕಲಾವಿದ ಉಪೇಂದ್ರ ಭಟ್

ಆಧುನಿಕತೆಯ ನಾಗಾಲೋಟಕ್ಕೆ ಸಿಲುಕಿ ನಮ್ಮ ಸಂಪ್ರದಾಯಗಳು, ಸಂಸ್ಕೃತಿಗಳ ಆಚರಣೆ ಕಡಿಮೆಯಾಗುತ್ತ ಸಾಗುತ್ತಿವೆ. ಒಂದು ಕಾಲದಲ್ಲಿ ಮೆರೆಯುತ್ತಿದ್ದ ರಂಗೋಲಿ ಕಲೆ ಕೂಡ ತೆರೆಮರೆಗೆ ಸರಿಯುತ್ತಿರುವ ಕಾಲವಿದು.  ವೈಟ್ ಕಾಲರ್‌ಗಳ ಉದ್ಯೋಗವೇ ಬೇಕು ಎನ್ನುವ ಇಂತಹ ಸಂದರ್ಭದಲ್ಲಿ ಇಲ್ಲೊಬ್ಬರು ಈ ಪೌರೋಹಿತ್ಯ ಹಾಗೂ ರಂಗೋಲಿಗಳಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.ಅವರೇ ಮೂಡಬಿದ್ರೆಯ ಉಪೇಂದ್ರ ಭಟ್. ತರಹೇವಾರಿ ರಂಗೋಲಿ ಬಿಡಿಸುವುದು ಇವರಿಗೆ ನೀರು ಕುಡಿದಷ್ಟೇ ಸಲೀಸು. ರಂಗೋಲಿಯಿಂದಲೇ ಇವರು ಫೇಮಸ್ಸು.

ಭಟ್ಟರ ಕೈಯಲ್ಲಿ, ರಂಗಿನ ರಂಗವಲ್ಲಿ:

ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಉಪೇಂದ್ರ ಭಟ್ಟರು  ಪ್ರೌಢ ಶಿಕ್ಷಣವನ್ನು ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಸಂಪೂರ್ಣಗೊಳಿಸಿದರು. ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ೯ನೇ ತರಗತಿಯಿಂದಲೇ ರಂಗೋಲಿ ಕಲೆಯನ್ನು ಮೈಗೂಡಿಸಿಕೊಂಡರು. ನಂತರದ ಪದವಿ ಪೂರ್ವ ಶಿಕ್ಷಣವನ್ನು ಗುರುಗಳ ಮಾರ್ಗದರ್ಶನದಲ್ಲಿ ಅವರದೇ ಮನೆಯಲ್ಲಿದ್ದುಕೊಂಡು ಪೌರೋಹಿತ್ಯದ ಜೊತೆಗೆ ಹಿರಿಯಡ್ಕ ಸರಕಾರಿ ಕಾಲೇಜಿನಲ್ಲಿ ಮುಗಿಸಿ, ಪದವಿಯನ್ನು ಬಿ.ಬಿ.ಎಮ್ ಮುಗಿಸಿದರು.

ಸುಮಾರು  12 ವರ್ಷದಿಂದ  ಹಿರಿಯಡ್ಕ ಸಮೀಪದ ಗುಡ್ಡೆಯಂಗಡಿಯಲ್ಲಿ ತಮ್ಮ ಗುರುಗಳಾದ ಬಿ. ಗುರುರಾಜ ತಂತ್ರಿಯವರ ಮನೆಯಲ್ಲಿ  ವಾಸಿಸುತ್ತಿರುವ ಇವರು ತಮ್ಮಲ್ಲಿರುವ ಪೌರೋಹಿತ್ಯ ಹಾಗೂ ರಂಗೋಲಿ ಕಲೆಯನ್ನು ಜೀವನಾಧಾರ ಕಲೆಯನ್ನಾಗಿಸಿಕೊಂಡರು. ಆರಂಭದಲ್ಲಿ ಅಪ್ಪಅಮ್ಮನ ಮಹತ್ತ್ವಾಕಾಂಕ್ಷೆಯಿಂದಾಗಿ ಪೌರೋಹಿತ್ಯವನ್ನು ಆರಂಭಿಸಿದ ಉಪೇಂದ್ರ ಭಟ್‌ಅವರಿಗೆ ಆಸಕ್ತಿಯಿಲ್ಲದೇ ಕಷ್ಟವೆನಿಸಿತು. ಆದರೆ ಅದನ್ನೇ ವೃತ್ತಿಯನ್ನಾಗಿಸಿಕೊಂಡಾಗ ಪೌರೋಹಿತ್ಯದ ಬಗ್ಗೆ ಅಪಾರ ಆಸಕ್ತಿ ಬೆಳೆಯಿತು.

ಕೈ ಹಿಡಿದ ಕಲೆಯ ಸೆಲೆ:

ಕೇರಳದ ಶ್ರೀಕಾಂತ ಆಚಾರ್ಯ, ಇವರ ಅದ್ಭುತ ರಂಗೋಲಿ ಕಲೆಯ ಸ್ಪೂರ್ತಿಯಿಂದಾಗಿ ಉಪೇಂದ್ರ ಭಟ್‌ಕಲೆಯನ್ನು ಮೈಗೂಡಿಸಿಕೊಂಡ ಇವರು ದೇವಿ, ಭದ್ರಕಾಳಿ, ಹನುಮಂತ, ನಾಗ ಇತ್ಯಾದಿ ದೇವರ ಮಂಡಲಗಳನ್ನು ಅತ್ಯಾಕರ್ಷಕ ರೂಪದಲ್ಲಿ ಬಿಡಿಸುತ್ತಾರೆ. ಸಮಯವಿದ್ದಾಗ ಕೃಷಿ ಕೆಲಸದಲ್ಲಿ ತೊಡಗುತ್ತಾರೆ. ಅನೇಕ ಪುರಸ್ಕಾರಗಳೂ ಇವರ ಮುಡಿಗೇರಿದೆ.

   “ಯಾವುದೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮಂಡಲಗಳು ಹಾಗೂ ರಂಗೋಲಿಗಳು ಪ್ರಮುಖ ಪಾತ್ರವಹಿಸುತ್ತದೆ. ಹಿಂದುಗಳು ದೇವರ ಆರಾಧನೆಗೆ ಅತಿಹೆಚ್ಚು ಮಹತ್ತ್ವ ನೀಡುವುದರಿಂದ ರಂಗೋಲಿಗೆ ಬೇಡಿಕೆಯೂ ಹೆಚ್ಚು.ಇವೆಲ್ಲಾ ಕಾರಣಗಳಿಂದ ಇದೊಂದು ಅವಕಾಶಯುತ ಕ್ಷೇತ್ರ.ಇದರಿಂದ ಉತ್ತಮ ಸಂಪಾದನೆಯನ್ನು ಮಾಡಬಹುದು ಎನ್ನುತ್ತಾರೆ” ಉಪೇಂದ್ರ ಭಟ್.

ಉಪೇಂದ್ರ ಭಟ್‌ ಅವರು ಹೇಳುವ ಪ್ರಕಾರ, ಇದೊಂದು ನೆಮ್ಮದಿಯ ಕೆಲಸ. ಈ ಕ್ಷೇತ್ರದಲ್ಲಿ ಯಾವುದೇ ಮೇಲಧಿಕಾರಿಗಳ ಒತ್ತಡ ಇರುವುದಿಲ್ಲ. ಹಾಗೂ ಕಾರ್ಯ ಒತ್ತಡವು ಕಡಿಮೆ ಇರುತ್ತದೆ. ನಮಗೆ ಬೇಕಾದಾಗ ರಜೆ ಪಡೆಯುವ ಅಧಿಕಾರವು ನಮ್ಮ ಕೈಯಲ್ಲಿರುತ್ತದೆ. ಇವೆಲ್ಲಾ ಕಾರಣಗಳಿಂದ ಬೇರೆಲ್ಲಾ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಅಧಿಕ ಸ್ವಾತಂತ್ರ್ಯವಿದೆ. ನಾವು ಮಾಡುವ ಯಾವುದೇ ಕೆಲಸವಿರಲಿ ಅದನ್ನು ಅಚ್ಚುಕಟ್ಟಾಗಿ, ಆಸಕ್ತಿಯಿಂದ ನಿರ್ವಹಿಸಿದರೆ ಅದರಿಂದ ಸಫಲತೆಯನ್ನುಕಾಣಬಹುದು ಎನ್ನುವುದಕ್ಕೆ ಉಪೇಂದ್ರ ಭಟ್ ಯುವಜನತೆಗೆ ಮಾದರಿ ಉಪೇಂದ್ರ ಭಟ್ ಅವರ ಸಂಪರ್ಕ : 88612 47764

-ಶರಧಿ ಆರ್. ಫಡ್ಕೆ. ಮಾಳ