ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡ ಸೆಲೆಬ್ರಿಟಿ ಕಪಲ್ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರು ತಮ್ಮ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೂ ತಾರಾ ಜೋಡಿಯ ಅಮೆರಿಕದ ಟ್ರಿಪ್ನ ಪೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಬಾಲಿವುಡ್ ಸುಂದರ ಜೋಡಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಪ್ರಸ್ತುತ ಅಮೆರಿಕದಲ್ಲಿದ್ದಾರೆ.ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ದಂಪತಿ ನಟಿ ಕರೀಷ್ಮಾ ಕಪೂರ್ ಜೊತೆ ನ್ಯೂಯಾರ್ಕ್ನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್ ಆಗುತ್ತಿದೆ.
ಪೋಸ್ಟ್ ಹಂಚಿಕೊಂಡ ಕರೀಷ್ಮಾ, “ನ್ಯೂಯಾರ್ಕ್ ನೈಟ್ ಔಟ್ #ಫ್ಯಾಮಿಲಿ” ಎಂದು ಕ್ಯಾಪ್ಶನ್ ನೀಡಿದ್ದಾರೆ. ಫೋಟೋದಲ್ಲಿ ರಣ್ಬೀರ್ ಕಪ್ಪು ಜಾಕೆಟ್ ಮತ್ತು ಬೀನಿ ಕ್ಯಾಪ್ ಧರಿಸಿದ್ದರೆ, ಆಲಿಯಾ ಹಸಿರು ಬಣ್ಣದ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಇತ್ತೀಚೆಗಿನ ಕೇಶ ವಿನ್ಯಾಸವು ಹೊಸ ಸಿನಿಮಾದ ತಯಾರಿ ಎಂದು ನೆಟ್ಟಿಗರು ಭಾವಿಸಿದ್ದಾರೆ.
ಇದಕ್ಕೂ ಮೊದಲು, ನ್ಯೂಯಾರ್ಕ್ನಲ್ಲಿ ರಣ್ಬೀರ್ ಮತ್ತು ಆಲಿಯಾ ಭಟ್ ಅವರ ಡಿನ್ನರ್ ಡೇಟ್ ಫೋಟೋಗಳು ಮತ್ತು ವಿಡಿಯೋಗಳು ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಹಲವು ವೈರಲ್ ಫೋಟೋಗಳು ಮತ್ತು ವಿಡಿಯೋದಲ್ಲಿ ದಂಪತಿ ರೆಸ್ಟೋರೆಂಟ್ನಲ್ಲಿ ಜೊತೆಯಾಗಿ ಕಾಲ ಕಳೆಯುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದವು. ರಣ್ಬೀರ್ ಮತ್ತು ಆಲಿಯಾ ಕಳೆದ ತಿಂಗಳು ಅಮೆರಿಕ ಪ್ರವಾಸಕ್ಕೆ ತೆರಳುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಮಂಗಳವಾರ, ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅವರು ಸೋದರ ಸಂಬಂಧಿ ಆಗಿರುವ ನಟಿ ಕರೀಷ್ಮಾ ಕಪೂರ್ ಜೊತೆ ನ್ಯೂಯಾರ್ಕ್ನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್ ಆಗಿವೆ. ಈ ಸುಂದರ ಫೋಟೋಗಳನ್ನು ಕರೀಷ್ಮಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂರು ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಆಲಿಯಾ ಮತ್ತು ರಣ್ಬೀರ್ ಮಧ್ಯೆ ಕರೀಷ್ಮಾ ಕಪೂರ್ ನಿಂತಿರುವುದನ್ನು ಕಾಣಬಹುದು. ರಣ್ಬೀರ್ ಆಕೆಯ ತಲೆಯ ಮೇಲೆ ಚುಂಬಿಸುತ್ತಿದ್ದಾರೆ. ಆಲಿಯಾ ಪರಿಪೂರ್ಣ ಚಿತ್ರಕ್ಕಾಗಿ ಅವರಿಬ್ಬರನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು.
ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ 2022ರ ಏಪ್ರಿಲ್ 14 ರಂದು ಮದುವೆಯಾದರು. 2022ರ ಜೂನ್ ತಿಂಗಳಲ್ಲಿ ಆಲಿಯಾ ತಮ್ಮ ಗರ್ಭಧಾರಣೆ ಘೋಷಿಸಿದರು. ಕಳೆದ ವರ್ಷ ನವೆಂಬರ್ 6 ರಂದು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗುವಿಗೆ ರಾಹಾ ಎಂದು ಹೆಸರಿಡಲಾಗಿದೆ.
ಇನ್ನೂ ಆಲಿಯಾ ಭಟ್ ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ನಲ್ಲಿ ರಣವೀರ್ ಸಿಂಗ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಥಿಯೇಟರ್ನಲ್ಲಿ ಧೂಳೆಬ್ಬಿಸಿತ್ತು. ಇದರ ಜೊತೆ ಆಲಿಯಾ ಮೊದಲನೇ ಬಾರಿಗೆ ಆಕ್ಷನ್ ಥ್ರಿಲ್ಲರ್ ಚಿತ್ರ ‘ಹಾರ್ಟ್ ಆಫ್ ಸ್ಟೋನ್’ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಇದಲ್ಲದೇ, ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಮುಂಬರುವ ಚಿತ್ರ ‘ಜೀ ಲೇ ಜರಾ’ದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ವಿಚಾರವಾಗಿ ನೋಡುವುದಾದರೆ.. ರಣ್ಬೀರ್ ಕಪೂರ್ ಅವರು ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಪ್ರೀ ಟೀಸರ್ ಬಿಡುಗಡೆಯಾಗಿದೆ. ಮೊದಲ ಬಾರಿಗೆ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ರಣ್ಬೀರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.