ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಹೇಳಿಕೆಯನ್ನು ಆಧರಿಸಿ, ಸಾಮಾನ್ಯರಿಗೆ ನ್ಯಾಯ ಸಿಗುವಂತಾಗಲಿ ಎಂದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ದರ್ಶನ್ ಅಭಿಮಾನಿಗಳು ರಮ್ಯಾರ ಪೋಸ್ಟ್ಗೆ ಅಶ್ಲೀಲವಾಗಿ ಕಮೆಂಟ್ಗಳನ್ನು, ಕೆಲವರು ಬೆದರಿಕೆಗಳನ್ನು ಸಹ ಹಾಕಿದ್ದರು. ಈ ಕುರಿತಾಗಿ ತನಿಖೆ ಆಗಲಿ ಎಂದು ರಾಜ್ಯ ಮಹಿಳಾ ಆಯೋಗ ಪೊಲೀಸ್ ಆಯುಕ್ತರ ಬಳಿ ಮನವಿ ಮಾಡಿದೆ.ರಮ್ಯಾ ವಿರುದ್ಧ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ರಾಜ್ಯ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ.
ಮಾಜಿ ಸಂಸದೆ ಹಾಗೂ ಚಲನಚಿತ್ರ ನಟ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ (ಜಾಮೀನು ರದ್ದು ಕೋರಿ) ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜುಲೈ 24ರಂದು ಎರಡೂ ಕಡೆಯ ವಾದನ್ನು ಆಲಿಸಿ, ತೀರ್ಪು ಕಾಯ್ದಿರಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ದರ್ಶನ್ಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮವನ್ನು ಸುಪ್ರೀಂಕೋರ್ಟ್ ಟೀಕಿಸಿದೆ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಹೇಳಿಕೆಗಳನ್ನು ಉಲ್ಲೇಖಿಸಿ ಲೈವ್ ಲಾ ಸುದ್ದಿ ಮಾಧ್ಯಮ ಮಾಡಿರುವ ವರದಿಯ ಸ್ಕ್ರೀನ್ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡ ನಟಿ ರಮ್ಯಾ, ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಹೀಗಾಗಿ ದರ್ಶನ್ ಅಭಿಮಾನಿಗಳು ರಮ್ಯಾ ಅವರ ವಿರುದ್ಧ ಮುಗಿಬಿದ್ದಿದ್ದಾರೆ.
ನಿನ್ನೆಯಷ್ಟೇ ರಮ್ಯಾ ಅವರು ಎಲ್ಲ ಡಿ ಬಾಸ್ (ದರ್ಶನ್) ಅಭಿಮಾನಿಗಳೇ ನನ್ನ ಇನ್ಸ್ಟಾಗ್ರಾಂ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಾಮೆಂಟ್ಗಳೇ ಸಾಕ್ಷಿ ಎಂದು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದರು. ರಮ್ಯಾ ಅವರು ಆ ರೀತಿ ಸ್ಟೋರಿ ಪೋಸ್ಟ್ ಮಾಡುವುದಕ್ಕೆ ಕಾರಣ ಏನೆಂದರೆ, ಅನೇಕ ದರ್ಶನ್ ಅಭಿಮಾನಿಗಳು ರಮ್ಯಾ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡಿದ ಸ್ಕ್ರೀನ್ಶಾಟ್ಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ ಅವರು ಶೇರ್ ಮಾಡಿಕೊಂಡರು. ದರ್ಶನ್ ಅಭಿಮಾನಿಗಳು ಎಷ್ಟು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು ಅಂದರೆ, ಅದನ್ನು ಊಹಿಸಲು ಸಾಧ್ಯವಿಲ್ಲ. ಇದರಿಂದ ಆಕ್ರೋಶಗೊಂಡಿರುವ ರಮ್ಯಾ, ಇದೀಗ ದೂರು ನೀಡಲು ಮುಂದಾಗಿದ್ದಾರೆ.
ತಮ್ಮ ವಕೀಲರೊಂದಿಗೆ ಚರ್ಚೆ ಮಾಡಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ನಟಿ ರಮ್ಯಾ ಅವರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದು, ರಮ್ಯಾ ಅವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ, ಸುಮೊಟೋ ಪ್ರಕರಣ ದಾಖಲಿಸಲು ಅವಕಾಶವಿದ್ದರೆ ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ದರ್ಶನ್ ಅಭಿಮಾನಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ರಮ್ಯಾ ಅವರು ಹೇಳಿದಂತೆ ದೂರು ದಾಖಲಿಸಿದರೆ, ಕಾಮೆಂಟ್ ಮಾಡಿದ ಕಡಿಗೇಡಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಇಂತಹ ಕಾಮೆಂಟ್ ಮಾಡುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.












