ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟದ( Rameshwaram Cafe Blast) ಶಂಕಿತ ಉಗ್ರನ ಹುಡುಕಾಟಕ್ಕೆ ಬಲೆ ಬೀಸಲಾಗಿದೆ. ಆತನ ಮುಖ ಚಹರೆ ಸ್ಪಷ್ಟವಾಗಿ ಗೋಚರಿಸದ ಕಾರಣ ಪತ್ತೆ ಕಷ್ಟವಾಗಿದೆ.
ಶಂಕಿತ ಉಗ್ರ ಎಲ್ಲಿಯೂ ತನ್ನ ಮುಖ ಕಾಣದಂತೆ ಟೋಪಿ ಹಾಗೂ ಮಾಸ್ಕ್ ಬಳಸಿದ್ದಾನೆ. ಸ್ಪೋಟದ ಮುಂಚೆ ಹಾಗೂ ಸ್ಪೋಟದ ನಂತರ ಎಲ್ಲೆಲ್ಲಿ ಓಡಾಡಿದ್ದರೂ ಯಾವ ಸಿಸಿಟಿವಿಯಲ್ಲಿಯೂ ಆತನ ಮುಖ ಸ್ಪಷ್ಟವಾಗಿ ಕಂಡು ಬಂದಿಲ್ಲ. ಶಂಕಿತನ ಅರ್ಧ ಮುಖ ಕಾಣುವ ಸಿಸಿಟಿವಿಯ ಫೋಟೊವನ್ನು NIA ಬಿಡುಗಡೆ ಮಾಡಿದ್ದು, ಹುಡುಕಿಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಇದರ ಬೆನ್ನಲ್ಲೇ ಅಧಿಕಾರಿಗಳ ತನಿಖೆಗೆ ಸಹಾಯವಾಗಲಿ ಎಂದು ಶಂಕಿತ ಉಗ್ರನ ಊಹಾತ್ಮಕ ರೇಖಾಚಿತ್ರವನ್ನು ಚಿತ್ರಕಾರರೊಬ್ಬರು ಬಿಡಿಸಿದ್ದಾರೆ. ಕಲಾವಿದ ಹರ್ಷ ಎನ್ನುವವರು ಉಗ್ರ ಈ ರೀತಿ ಇರಬಹುದು ಎಂದು ಊಹೆ ಮಾಡಿ ಬರೆದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್ ವೈರಲ್ ಆಗಿದೆ. ಇದನ್ನು ಬೆಂಗಳೂರು ಪೊಲೀಸ್ ಹಾಗೂ ಎನ್‌ಐಎಗೆ ಟ್ಯಾಗ್ ಮಾಡಿದ್ದಾರೆ.
ಶಂಕಿತ ಉಗ್ರ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಎನ್‌ಐಎ ತೀವ್ರ ಶೋಧ ನಡೆಸುತ್ತಿದೆ. ಶಂಕಿತ ಬೆಂಗಳೂರಿನ ಸುಜಾತ ಸರ್ಕಲ್‌ನಲ್ಲಿ ಬಸ್ ಹತ್ತಿ ತುಮಕೂರಿಗೆ ಬಂದಿದ್ದಾನೆ. ಅಲ್ಲಿಂದ ಮತ್ತೆ ಬಳ್ಳಾರಿಗೆ ಬಂದು, ಅಲ್ಲಿಂದ ಮಂತ್ರಾಲಯ-ಗೋಕರ್ಣ ಬಸ್ ಹತ್ತಿ ಭಟ್ಕಳಕ್ಕೆ ತೆರಳಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರೀಯ ತನಿಖಾ ದಳ ಬಳ್ಳಾರಿ ಮತ್ತು ತುಮಕೂರು ಬಸ್ ನಿಲ್ದಾಣಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ.