ಕರಾವಳಿಯ ಯಕ್ಷಗಾನ ಕಲೆಯಲ್ಲೂ ರಾಜಕೀಯ ಬೆರೆಸಿರುವ ಬಿಜೆಪಿ ನಡೆ ಖಂಡನೀಯ: ರಮೇಶ್ ಕಾಂಚನ್

ಉಡುಪಿ: ರಾಜ್ಯ ಬಿಜೆಪಿ ಸರಕಾರವು 40% ಕಮಿಷನ್ ತಿಂದು ಅದೂ ಸಾಕಾಗದೆ ಈಗ ಇದ್ದ ಬದ್ದ ಎಲ್ಲಾ ಸಂಘ ಸಂಸ್ಥೆಗಳಿಗೂ ರಾಜಕೀಯ ಅಂಟಿಸುವ ಪರಿಪಾಠ ಬೆಳೆಸುತ್ತಿರುವುದು ಖಂಡನೀಯ. ಉಡುಪಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಸುವ ಮೂಲಕ ಯಕ್ಷಗಾನ ರಂಗಕ್ಕೂ ರಾಜಕೀಯ ತಂದಿರುವುದು ಬೇಸರದ ಸಂಗತಿ.

ಸಮಗ್ರ ಯಕ್ಷಗಾನ ಹೆಸರಲ್ಲಿ ಯಕ್ಷಗಾನದ ಸಮಗ್ರತೆಯನ್ನು ಮರೆತು ಸೀಮಿತಗೊಳಿಸಿರುವುದು ನ್ಯಾಯವೇ ?

ನಮ್ಮ ರಾಜ್ಯದ ಸಂಸ್ಕೃತಿಕ ಜಾನಪದ ಕಲೆಯಾದ ಯಕ್ಷಗಾನ ಸಮ್ಮೇಳನದಲ್ಲಿ 90%ಕ್ಕೂ ಅಧಿಕ ರಾಜಕೀಯ ನಾಯಕರೇ ತುಂಬಿ ಉದ್ಘಾಟನೆ ಬಿಜೆಪಿ ಪಕ್ಷದ ಕಾರ್ಯಕ್ರಮದ ಹಾಗೆ ಆಗಿರುವುದು ಯಕ್ಷಗಾನ ಪ್ರೇಮಿಗಳಾದ ನಮಗೆ ಮುಜುಗರ.

ಯಕ್ಷಗಾನ ಅನ್ನುವ ಪದ ಕೇಳಿದಾಗ ಚಿಟ್ಟಾಣಿ ಅನ್ನುವ ಮೇರು ನಟ ಸಾರ್ವಭೌಮ ನೆನಪಾಗದೇ ಇರಲಾರರು. ಕನ್ನಡದ ಮೇರು ನಟ ರಾಜ್‌ಕುಮಾರ್ ಅವರೇ ಸ್ವತಃ ಬೆಳ್ಳಿ ಕಿರೀಟ ತೊಡಿಸಿ ಚಿಟ್ಟಾಣಿ ಅವರ ಕಲೆಗೆ ಬೆರಗಾಗಿದ್ದು ಅಂತಹ ಚಿಟ್ಟಾಣಿ ಅವರಿಗೆ ದೇಶದ ಉಚ್ಚ ಪದ್ಮ ಪ್ರಶಸ್ತಿ ಯಕ್ಷಗಾನಕ್ಕೆ ಮೊದಲಾಗಿ ಒಲಿದು ಬಂದಿದ್ದು ಯಕ್ಷಗಾನ ಅಕಾಡೆಮಿಗೆ ನೆನಪಿಲ್ಲವೇ ?

ಎಲ್ಲಿಯ ಪದ್ಮಶ್ರೀ ಚಿಟ್ಟಾಣಿ ಎಲ್ಲಿಯ ರೋಹಿತ್ ಚಕ್ರತೀರ್ಥ? ಹೋಲಿಕೆ ಸಾಧ್ಯವೇ. ಹಾಗಿರುವಾಗ ಯಕ್ಷಗಾನ ರಂಗಕ್ಕೆ ಸಂಬಂಧ ಪಡದ ವಿವಾದಾತ್ಮಕ ವ್ಯಕ್ತಿಯ ಬಾಯಲ್ಲಿ ಯಕ್ಷಗಾನದ ದಿಕ್ಸುಚಿ ಭಾಷಣ. ಇಂತ ಹೊಲಸು ರಾಜಕೀಯವನ್ನು ಪರಿಪೂರ್ಣ ಕಲೆಯಾದ ಯಕ್ಷಗಾನದಲ್ಲೂ ಬೆರೆಸುತ್ತಿರುವ ಬಿಜೆಪಿಗೆ ಯಾವ ನೈತಿಕತೆ ಇದೆ.

ಯಕ್ಷಗಾನ ಸಮ್ಮೇಳನ ನೆಪದಲ್ಲಿ ಬಿಜೆಪಿ ಜನರನ್ನು ಸೆಳೆಯುವ ಮತ್ತು ಅಧಿಕಾರ ಬಳಸಿ ಕಲೆಯಲ್ಲೂ ಹುಳಿ ಹಿಂಡುವ ಶಕುನಿ ಬುದ್ದಿಗೆ ಜನ ಬುದ್ದಿ ಕಲಿಸದೇ ಇರಲಾರರು.

ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರವನ್ನು ಪಠ್ಯ ಪುಸ್ತಕದಿಂದ ಕೈಬಿಟ್ಟ, ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನು ತಿರುಚಿ ಇಂತಹ ಹಲವು ವಿಷಯಗಳಲ್ಲಿ ವಿವಾದವನ್ನು ಸೃಷ್ಟಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಯಕ್ಷಗಾನ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಕರೆಸಿರುವ ಕಾರಣವೇನು?

ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಆಕಾಂಕ್ಷಿ ಅಭ್ಯರ್ಥಿಯ ಪಟ್ಟಿಯಲ್ಲಿರುವ ರೋಹಿತ್ ಚಕ್ರತೀರ್ಥ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆಸಿ ಸರ್ಕಾರದ ಹಣದಲ್ಲಿ ಪ್ರಚಾರ ನೀಡುವ ಹುನ್ನಾರವೇ ?

ಯಕ್ಷಗಾನ ಸಾಧಕರಿಗೆ ಸುಣ್ಣ ಬೆಣ್ಣೆಯ ತಂತ್ರ ಅನುಸರಿಸಿ ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ರಣತಂತ್ರಕ್ಕೆ ರಾಜ್ಯದ ಮತ್ತು ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಮುಂಬರುವ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.