ಏ. 9ರಿಂದ 18ರ ವರೆಗೆ ಶೀರೂರು ಮೂಲಮಠದಲ್ಲಿ ರಾಮನವಮಿ ಮಹೋತ್ಸವ

ಹಿರಿಯಡಕ: ಏ. 9ರಿಂದ 18ರ ವರೆಗೆ ಶೀರೂರು ಮೂಲಮಠದಲ್ಲಿ ರಾಮನವಮಿ ಮಹೋತ್ಸವವು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದ ನೇತೃತ್ವದಲ್ಲಿ ನಡೆಯಲಿದೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

9ರಂದು ಬೆಳಿಗ್ಗೆ ಹಯಗ್ರೀವ ಮಂತ್ರಹೋಮ, ಸಂಜೆ ಕುಣಿತ ಭಜನೆ ನಡೆಯಲಿದೆ. 10ರಂದು ಬೆಳಿಗ್ಗೆ ಶಾಕಲ ಋಕ್ಸಂಹಿತಾ ಯಾಗ, ಸಂಜೆ ಗಿರಿಬಳಗ ಕುಂಜಾರು ಸದಸ್ಯರಿಂದ ಛತ್ರಪತಿ ಶಿವಾಜಿ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಲಿದೆ.

11ರಂದು ಸಂಜೆ 4ಕ್ಕೆ ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಶ್ರೀಪಾದ ಪಟ್ಟದ ದೇವರೊಂದಿಗೆ ಆಗಮಿಸಲಿದ್ದು, ಗಂಗಾ ಶಶಿಧರನ್ ಅವರಿಂದ ವಯೋಲಿನ್ ವಾದನ ನಡೆಯಲಿದೆ. 12ರಂದು ಸಂಜೆ ಮಹಾಲಿಂಗೇಶ್ವರ ಚೆಂಡೆ ಬಳಗ ಮಾರ್ಪಳ್ಳಿ ಇವರಿಂದ ‘ಊರ್ದ ಪರ್ಬ’ ಕಾರ್ಯಕ್ರಮ ನಡೆಯಲಿದೆ.

13ರಂದು ಸಂಜೆ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದ ಪಟ್ಟದ ದೇವರೊಂದಿಗೆ ಆಗಮಿಸಲಿದ್ದು, ಭೂತರಾಜರ ಪೂಜೆ ನಡೆಯಲಿದೆ. ಸುಧೀರ್ ರಾವ್ ಕೊಡವೂರು ತಂಡದವರಿಂದ ನಾರಸಿಂಹ ನೃತ್ಯ ರೂಪಕ ನಡೆಯಲಿದೆ. 14ರಂದು ಸಂಜೆ ಪಂಡಿತ್ ವೆಂಕಟೇಶ್ ಕುಮಾರ್ ಮತ್ತು ತಂಡದವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ.

15ರಂದು ಸಂಜೆ ಮೈಸೂರು ರಾಮಚಂದ್ರ ಆಚಾರ್ಯ ಮತ್ತು ತಂಡದವರಿಂದ ಭಕ್ತಿ ಸಂಗೀತ ನಡೆಯಲಿದೆ. 16ರಂದು ಸಂಜೆ ಕಟ್ಟೆಪೂಜೆ, ಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ಮ್ಯಾಜಿಕ್ ಶೋ ನಡೆಯಲಿದೆ.

17ರಂದು (ರಾಮನವಮಿ) ಬೆಳಿಗ್ಗೆ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆ, ಪವಮಾನ ಕಲಶ, ಪಟ್ಟದ ಪೂಜೆ, ಮುಖ್ಯಪ್ರಾಣ ದೇವರ ಪೂಜೆ, ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ರಿಂದ ಹಿನ್ನೆಲೆ ಗಾಯಕ ಸಾಯಿ ವಿಘ್ನೇಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ಪಟ್ಟದ ದೇವರೊಂದಿಗೆ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದ ಆಗಮಿಸಲಿದ್ದು, ಪ್ರಾಣದೇವರ ರಂಗಪೂಜೆ, ರಥೋತ್ಸವ, ಓಲಗ ಮಂಟಪ ಪೂಜೆ ನಡೆಯಲಿದೆ‌. ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

18ರಂದು ಬೆಳಿಗ್ಗೆ ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿ, ಹಗಲು ರಥೋತ್ಸವ, ಓಲಗ ಮಂಟಪ ಪೂಜೆ, ಅವಭೃತ ಸ್ನಾನ ನಡೆಯಲಿದೆ‌. ರಾತ್ರಿ 9ಕ್ಕೆ ಮಠದ ಬೊಬ್ಬರ್ಯ ಕೋಲ ನಡೆಯಲಿದೆ‌ ಎಂದು ಪ್ರಕಟಣೆ ತಿಳಿಸಿದೆ.