ಮೊದಲನೆ ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಟ ರಾಮ್ ಚರಣ್: ಸಿಹಿ ಸುದ್ದಿ ಹಂಚಿಕೊಂಡ ಅಪ್ಪ ಚಿರಂಜೀವಿ

ನಟ ಚಿರಂಜೀವಿ ತಮ್ಮ ಮಗ, ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಘೋಷಿಸಿದ್ದಾರೆ. ಸೋಮವಾರ ಟ್ವಿಟರ್‌ನಲ್ಲಿ ಚಿರಂಜೀವಿ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

“ಶ್ರೀ ಹನುಮಾನ್ ಜಿ ಅವರ ಆಶೀರ್ವಾದದೊಂದಿಗೆ ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ ಸುರೇಖಾ ಮತ್ತು ಚಿರಂಜೀವಿ ಕೊನಿಡೇಲ ಶೋಬನಾ ಮತ್ತು ಅನಿಲ್ ಕಾಮಿನೇನಿ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

ಜೂನ್ ನಲ್ಲಿ, ರಾಮ್ ಚರಣ್ ಮತ್ತು ಉಪಾಸನಾ ದಂಪತಿಗಳು ತಮ್ಮ 10 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು. ಆರ್.ಆರ್.ಆರ್ ನ ಅಮೋಘ ಯಶಸ್ಸಿನ ಬಳಿಕ ಇದೀಗ ರಾಮ್ ಚರಣ್ ದಂಪತಿಗಳು ಮಗುವಿನ ಆಗಮನದ ಸಂತೋಷದಲ್ಲಿದ್ದಾರೆ. ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಮುಂದಿನ ಸಿನಿಮಾದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ.

ರಾಮ್ ಚರಣ್ ಸದ್ಯಕ್ಕೆ ಚಿತ್ರ ನಿರ್ಮಾಪಕ ಶಂಕರ್ ಅವರ ಮುಂದಿನ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಕಿಯಾರಾ ಅಡ್ವಾನಿ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿದ್ದು, ರಾಮ್ ಐ.ಎಸ್.ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.