ಇವನೆಂದೂ ನಂಗೆ ರಕ್ಷಾಬಂಧನದ ಗಿಫ್ಟ್ ಕೊಟ್ಟಿಲ್ಲ ಯಾಕಂದ್ರೆ? : “ರಕ್ಷಾ” ಬಂಧನದ ದಿನ ರಕ್ಷಾ ಬರೆಯುತ್ತಾರೆ.

ಸಾಮಾನ್ಯವಾಗಿ ಈ ತಮ್ಮಂದಿರು ಅಕ್ಕನ ಮೇಲಿರೋ ಪ್ರೀತಿನ ವ್ಯಕ್ತಪಡಿಸೋದಿಲ್ಲ. ಆದರೆ ಅವರು ಅಕ್ಕಂದಿರ ಮೇಲೆ ಬೆಟ್ಟದಷ್ಟು ಪ್ರೀತಿ, ಕಾಳಜಿ ಇಟ್ಕೊಂಡಿರ್ತಾರೆ ಅನ್ನೋದು ಪ್ರತಿಯೊಬ್ಬ ಅಕ್ಕನಿಗೂ ತಿಳಿದಿರುವ ಸಂಗತಿ. ಅದೇ ರೀತಿ ಸೈಲೆಂಟಾಗೆ ಇದ್ದುಕೊಂಡು, ಸ್ಟ್ರಾಂಗ್‌ ಸಪೋರ್ಟ್‌ ನೀಡೋನು ನನ್ನ ತಮ್ಮ ಪಪ್ಪು.  ಹೌದು ತಮ್ಮ ಆಗಿದ್ರೂ, ಅಣ್ಣನ ಸ್ಥಾನದಲ್ಲಿ ಇದ್ಕೊಂಡು ನನ್ನೆಲ್ಲಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರೋನು ಇವ್ನು.

ನಾವಿಬ್ಬರೂ ಹುಟ್ಟಿದ ದಿನ ಒಂದೇ, ಆದರೆ ವರ್ಷ ಬೇರೆ ಬೇರೆ. ಈ ಸನ್ನಿವೇಶವೇ ನಮ್ಮ ನಡುವೆ ವಿಭಿನ್ನ ರೀತಿಯ ಭಾಂಧವ್ಯ ಬೆಸೆಯಲು ನಾಂದಿಯಾಯಿತು.

ಇವನಂದ್ರೆ ಹಬ್ಬದ ಸಡಗರ:

ನನ್ನ ಎರಡನೇ ವರ್ಷದ ಜನುಮ ದಿನಾಚರಣೆಯ ದಿನದಂದು ಹುಟ್ಟಿದ ನನ್‌ ತಮ್ಮ, ನನಗಿಂತ ಎರಡು ವರ್ಷ ಚಿಕ್ಕವನು. ಆದರೆ ನನಗಿಂತ ಯಾವುದ್ರಲ್ಲೂ ಕಮ್ಮಿ ಇಲ್ಲ. ಈ ೨೦ ವರ್ಷ ಜೀವನದಲ್ಲಿ ಇವನ ಜೊತೆ ಕಳೆದಿರೋ ಸಾಕಷ್ಟು ನೆನಪುಗಳು ಸದಾ ಹಚ್ಚಹಸಿರು. ಚಿಕ್ಕ ವಯಸ್ಸಿನಲ್ಲಿ ಸ್ಕೂಲ್‌ ಅಂದ್ರೆ ಮಾರುದ್ದ ಓಡ್ತಾ ಇದ್ದ ಅವನನ್ನ, ಕಾಡಿ ಬೇಡಿ ಸ್ಕೂಲ್‌ಗೆ ಎಳ್ಕೊಂಡು ಹೋಗಿರೋ ಆ ದಿನಗಳು, ಏನಾದ್ರೂ ತಪ್ಪು ಮಾಡಿದಾಗ ಅಪ್ಪನ ಕೈಯಿಂದ ತಿಂದ ಆ ಏಟುಗಳು, ಪ್ರತಿಸಲ ಅಪ್ಪ ಹೊಡಿಯೋದು ಅವನಿಗಾದ್ರೂ, ಅಳ್ತಾ ಇದ್ದಿದ್ದು ಮಾತ್ರ ನಾನು. ಥಿಯರಿ ಅಂದ್ರೆ ? ನೋ? ಅಂತಿದ್ದ ಇವನಿಗೆ, ಪ್ರಾಕ್ಟಿಕಲ್‌ ವರ್ಕ್‌ನಲ್ಲಿ ಎಲ್ಲಿಲ್ಲದ ಆಸಕ್ತಿ. ಆ ವಿಷಯದಿಂದಲೇ ಎಲ್ಲರಿಗೂ ಪ್ರೀತಿ ಪಾತ್ರನಾದವನು. ಇನ್ನೂ ನನ್‌ ಕಣ್ಣಲ್ಲಾಗಲೀ, ಅಮ್ಮನ ಕಣ್ಣಲ್ಲಾಗಲಿ ನೀರನ್ನು ಯಾವತ್ತೂ ಸಹಿಸದ ಅವನದ್ದು ನನ್ನೆಲ್ಲಾ ಕಷ್ಟಗಳಿಗೆ ಮಿಡಿಯೋ ಮನಸ್ಸು. ಒಂದೇ ದಿನ ಹುಟ್ಟಿದ ನಾವಿಬ್ರೂ ಓದ್ತಾ ಇರೋದು, ಪತ್ರಿಕೋದ್ಯಮ ವಿಭಾಗದಲ್ಲಿ ಅನ್ನೋದು ಇನ್ನೊಂದು ವಿಶೇಷ.

ಇವನೆಂದೂ ರಾಖಿ ಕಟ್ಟಿಲ್ಲ:

ಇನ್ನೂ ರಕ್ಷಾ ಬಂಧನ ಅಂದ್ರೆ ತತ್‌ಕ್ಷಣ ನೆನಪಾಗೋದು ಅಕ್ಕ ಕಟ್ಟೋ ರಾಕಿ, ತಮ್ಮ ಕೊಡೋ ಗಿಫ್ಟ್. ಅವರ ನಡುವಿನ ಭಾಂದವ್ಯ, ಪ್ರೀತಿ. ಆದರೆ ಇಂತಹ ತೋರಿಕೆಯ ಪ್ರೀತಿಯನ್ನು ಇಷ್ಟಪಡದ ಇವನು ಇದುವರೆಗೂ ನನಗೆ ರಕ್ಷಾ ಬಂಧನ ಉಡುಗೊರೆ ಕೊಟ್ಟಿಲ್ಲ. ನಾನು ಅದನ್ನು ಯಾವತ್ತೂ ನಿರೀಕ್ಷಿಸಿಲ್ಲ. ಯಾಕಂದ್ರೆ ನನ್ನ ತಮ್ಮನೇ ನನಗೆ ಬಿಗ್‌ಗಿಫ್ಟ್. ಅವನ ಪ್ರೀತಿ-ಕಾಳಜಿ ಈ ಗಿಫ್ಟ್‌ಗಿಂತಲೂ ಮಿಗಿಲಾದದ್ದು. ಸೈಲಾಂಟಾಗೆ ಇದ್ದು, ನನ್ನ ಸಾಧನೆಗಳಿಗೆ ಆನಂದ ಪಡುವ ಇವನು ಯಾವತ್ತಿಗೂ ನನ್ನ ಜೀವದ ಗೆಳೆಯ, ನನ್ನ ಬದುಕಿನ ದೊಡ್ಡ ಸಂಪುಟ.

– ಶ್ರೀರಕ್ಷಾ ಶಿರ್ಲಾಲ್
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಆಳ್ವಾಸ್‌ಕಾಲೇಜು, ಮೂಡಬಿದ್ರಿ