ಉಡುಪಿ: ವಿದ್ಯಾರ್ಥಿನಿ ರಕ್ಷಿತಾ ನಾಯಕ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಮೊಗವೀರನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವಾರದಿಂದ ರಕ್ಷಿತಾ ನಾಯಕ್ ಗೆಳೆಯ ಪ್ರಶಾಂತ್ ಮೊಗವೀರನನ್ನು ಉಡುಪಿ ನಗರ ಠಾಣಾ ಪೊಲೀಸರು ಕರೆಸಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದರು. ಇದೀಗ ಆರೋಪಿಯನ್ನು ಬಂಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂರು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಏನಿದು ಘಟನೆ:
ಅಕ್ಟೋಬರ್ 24ರಂದು ರಕ್ಷಿತಾಳನ್ನು ಪ್ರಶಾಂತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ತಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದನು. ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಬಳಿಕ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಕಳುಹಿಸಿ ಕೊಡುತ್ತಿದ್ದರು. ಆದರೆ ಇದೀಗ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.
ರಕ್ಷಿತಾಗೆ ಮದ್ಯಪಾನ ಚಟ ಕಲಿಸಿದ್ದ:
ಪ್ರಶಾಂತ್ ಉಡುಪಿಯ ಅಂಬಾಗಿಲು ಬಳಿ ಬಾಡಿಗೆ ಮನೆ ಮಾಡಿ ಅಲ್ಲಿ ರಕ್ಷಿತಾಳನ್ನು ಇರಿಸಿದ್ದನು. ಬಳಿಕ ಆಕೆಯ ಜತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದನು. ಅಲ್ಲದೆ, ಆಕೆಗೆ ಮದ್ಯಪಾನ, ಸಿಗರೇಟು ಸೇವನೆಯ ಚಟಗಳನ್ನು ಕಲಿಸಿದ್ದನು. ಗೆಳೆಯರನ್ನು ಬಾಡಿಗೆ ಮನೆಗೆ ಕರೆಸಿ ಕಿರುಕುಳ ನೀಡುತ್ತಿದ್ದನು. ಆತನಿಗೆ ಮೊದಲೇ ಮದುವೆ ಆಗಿರುವ ವಿಷಯವನ್ನು ರಕ್ಷಿತಾಳಿಂದ ಮುಚ್ಚಿಟ್ಟದ್ದನು ಎಂದು ರಕ್ಷಿತಾ ಮನೆಯವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಮೊಗವೀರನನ್ನು ಪೊಲೀಸರು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.