ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಂಕುತಿಟ್ಟಿನ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಂಕುತಿಟ್ಟಿನ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ (78) ವಯೋಸಹಜ ಅಸೌಖ್ಯದಿಂದ ಇಂದು ನಿಧನ ಹೊಂದಿದರು.

ತಮ್ಮ ಹದಿಮೂರರ ಹರೆಯದಲ್ಲೇ ಯಕ್ಷಗಾನ ರಂಗ ಪ್ರವೇಶಿಸಿ ಸುದೀರ್ಘ ಆರು ದಶಕಗಳ ಕಲಾಸೇವೆಗೈದು ನಾಲ್ಕು ವರ್ಷದ ಹಿಂದೆ ವೃತ್ತಿರಂಗದಿಂದ ನಿವೃತ್ತರಾಗಿದ್ದರು. ಕುಂಡಾವು, ವೇಣೂರು, ಇರುವೈಲು, ಸೌಕೂರು, ಕಟೀಲು, ಎಡನೀರು, ಹನುಮಗಿರಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.

ಸಾತ್ವಿಕ, ರಾಜಸ ಎರಡೂ ರೀತಿಯ ಪೌರಾಣಿಕ ಪಾತ್ರಗಳಲ್ಲಿ ಸಮರ್ಥ ನಿರ್ವಹಣೆಯ ಮೂಲಕ ಅಪಾರ ಯಕ್ಷಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಕಿಲಾರು ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಮೃತರು ಪತ್ನಿ ಹಾಗು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.