ಉಡುಪಿ: ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಫಲವಾಗಿಲ್ಲ, ಇದರ ವಿಫಲತೆ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಜಾಹೀರಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜಂಟಿ ಸರ್ಕಾರ ಮೊದಲು ರೂ.53 ಸಾವಿರ ಕೋಟಿ ರೈತರ ಕೃಷಿ ಸಾಲಮನ್ನಾ ಮಾಡುವ ಭರವಸೆ ನೀಡಿತ್ತು, ಆದರೆ ಬಳಿಕ ಅದನ್ನು ರೂ. 34 ಸಾವಿರ ಕೋಟಿಗೆ ಇಳಿಸಿತ್ತು. ಅದನ್ನು ಕಳೆದ ಬಜೆಟ್ನಲ್ಲಿ ರೂ. 6.5 ಸಾವಿರ ಕೋಟಿ ತೆಗದಿರಿಸಿದ್ದು, ನಂತರ ಅದರಲ್ಲಿ ರೂ. 8,00 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಬೆಳಗಾವಿ ಆಧಿವೇಶನ ಪ್ರಾರಂಭಕ್ಕೆ 2 ದಿನ ಮುಂಚಿತವಾಗಿ ರೂ. 50 ಕೋಟಿ ಋಣ ಮುಕ್ತ ಪತ್ರ ರೈತರಿಗೆ ನೀಡಿರುವುದಾಗಿ ಹೇಳಿತ್ತು. ಸರ್ಕಾರವೇ ನೀಡಿದ ಲೆಕ್ಕದಂತೆ ಇದುವರೆಗೆ ಕೇವಲ ರೂ.2.92ಕೋಟಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದೆ. ಇದೆಲ್ಲವನ್ನು ಗಮನಿಸಿದಾಗ ಕೃಷಿ ಸಾಲಮನ್ನಾ ಎನ್ನುವುದು ಜಂಟಿ ಸರ್ಕಾರಕ್ಕೆ ಕಣ್ಣೊರೆಸುವ ತಂತ್ರವಾಗಿದೆ ಎಂದವರು ಹೇಳಿದರು.
ಅನ್ವರ್ ಮನಪ್ಪಾಡಿ ವರದಿ ಮಂಡಿಸಲು ಸದನದಲ್ಲಿ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಂಸದೀಯ ಮಂತ್ರಿಗಳು ಕೊಟ್ಟ ಭರವಸೆ ಸರ್ಕಾರ ಈಡೇರಿಸಿಲ್ಲ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ್ ಸಮಸ್ಯೆಗಳನ್ನು ಪರಿಹಾರ ಮಾಡಲು ಔರಾದ್ಕರ್ ವರದಿ ಬಗ್ಗೆ ಚರ್ಚಿಸಲು ಸಮಯ ನೀಡಿದೆ ಆದರೂ ಕೊನೆಗಳಿಗೆಯಲ್ಲಿ ಅಝೆಂಡಾದಿಂದ ಈ ವಿಷಯವನ್ನು ಕೈ ಬಿಡಲಾಯಿತ್ತು. ಗ್ರಾಮೀಣಾಭಿವೃದ್ಧಿ ವಿಷಯಕ್ಕೆ ಸಂಬಂಧಪಟ್ಟಂತೆ, ಬಾಪೂಜಿ ಕೇಂದ್ರದ ವಿಫಲತೆಯನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದು ಮಾಹಿತಿ ನೀಡಿದರು.
ಆರೋಗ್ಯ ಸಚಿವರಿಂದ ನಿರ್ಲಕ್ಷ:
ಚಾಮರಾಜ ನಗರ ಜಿಲ್ಲೆಯ ಸುಳ್ವಾಡಿ ತಾಲ್ಲೂಕಿನ ಮಾರಮ್ಮಾನ ದೇವಸ್ಥಾನ ಪ್ರಕರಣ ನಡೆದ
ಸ್ಥಳಕ್ಕೆ ನಾನು ಭೇಟಿ ನೀಡಿದ ನಂತರ ಆರೋಗ್ಯ ಸಚಿವರು ಆಗಮಿಸಿದ್ದಾರೆ. ಇದು ಅವರು
ರಾಜ್ಯದ ಜನತೆಯ ಮೇಲಿರಿಸಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ವಿಧಾನ ಪರಿಷತ್
ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.