ಡಾ. ರಾಜ್ಕುಮಾರ್ ಸಂಸ್ಕೃತಿ ದತ್ತಿ ಸ್ವೀಕರಿಸಿ ಮಾತನಾಡಿದ ನಟಿ ಡಾ. ಬಿ. ಸರೋಜಾದೇವಿ, “ನನಗೆ ದೇಶದಲ್ಲಿ ಏನೆಲ್ಲಾ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಅದ್ಯಾವುದು ಈ ಡಾ. ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಸರಿ ಸಮವಲ್ಲ. ಅದಕ್ಕೆ ಕಾರಣ ಡಾ. ರಾಜಕುಮಾರ್ ಅವರು ತನ್ನ ಹೆಮ್ಮೆಯ ನಾಯಕ ನಟ” ಎಂದು ಹೇಳಿದ್ದಾರೆ.ಪಂಚಭಾಷಾ ತಾರೆ, ಹಿರಿಯ ನಟಿ, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರಿಗೆ 2023 ನೇ ಸಾಲಿನ ಡಾ. ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶುಕ್ರವಾರ (ಸೆಪ್ಟಂಬರ್ 8) ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಸಭಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
“ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಚಿತ್ರಗಳು, ಅವರ ಜೊತೆ ಇರುವಾಗ ನಾನು ಕಲಿತ ಶಿಸ್ತು, ಜವಾಬ್ದಾರಿಯ ಕಾರಣವೇ ಹೆಚ್ಚಿನ ಅಭಿನಯವನ್ನು ಕಲಿಯುವುದಕ್ಕೆ ಕಾರಣವಾಗಿದ್ದು. ಅವರ ನಟನೆಗೆ ಸರಿದೂಗಿಸಲು ನಾವು ಕಷ್ಟಪಟ್ಟು ಅಭಿನಯ ಮಾಡಬೇಕಾಗುತ್ತಿತ್ತು. ಅದರ ಪರಿಣಾಮವೇ ಜನ ಮೆಚ್ಚುವ ಪಾತ್ರಗಳನ್ನು ಮಾಡುವುದಕ್ಕೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡ ನಾಡಿನ ಶಕ್ತಿ, ಕನ್ನಡಿಗರ ಅಭಿಮಾನ, ನಾಡು ನುಡಿಗೆ ಧೀಶಕ್ತಿ ತುಂಬಿದ ಧೀಮಂತ, ಕನ್ನಡದ ಮೇರು ವ್ಯಕ್ತಿತ್ವದ ವರನಟ ಡಾ. ರಾಜ್‌ಕುಮಾರ್ ಅಂದರೆ ರೋಮಾಂಚನ. ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅವರಿಗೆ ಇರುವ ನಂಬಿಕೆ ಹಾಗೂ ಅಭಿಮಾನವನ್ನು ಎಂದೂ ಪರಿಷತ್ತು ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಡಾ.ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಖ್ಯಾತ ಹಿನ್ನೆಲೆ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರಾ, “ವರನಟ ಡಾ. ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಲು ನಮ್ಮಲ್ಲಿ ಇರುವ ಪದಗಳು ಸಾಲದು. ಅವರ ವ್ಯಕ್ತಿತ್ವವೇ ಅಂತಹದ್ದು, ಅದು ವರ್ಣಿಸಲು ಅಸಾಧ್ಯ” ಎಂದು ಹೇಳಿದ್ದಾರೆ.
” ರಾಜ್‌ಕುಮಾರ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅವರಿಗೆ ಬಂದಿರುವ ಒಂದು ಲಕ್ಷ ರೂ ನಗದನ್ನು ನೇರವಾಗಿ ತಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಡುವ ಮೂಲಕ ಪರಿಷತ್ತಿನ ಮೇಲಿರುವ ವಿಶ್ವಾಸವನ್ನು ಎತ್ತಿ ತೋರಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅತಿ ವಿಶ್ವಾಸಾರ್ಹ ಸಂಸ್ಥೆ, ಜೊತೆಗೆ ಇದೊಂದು ಮಾದರಿ ಸಂಸ್ಥೆ, ಇದನ್ನು ರಾಜ್ ಕುಮಾರ್ ಅವರು ಸರಸ್ವತಿ ಮಂದಿರವೆಂದೇ ಕರೆಯುತ್ತಿದ್ದರು” ಎಂದು ನೆನಪಿಸಿಕೊಂಡಿದ್ದಾರೆ. “ಡಾ. ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪಡೆದಿರುವ ಪದ್ಮಭೂಷಣ ಡಾ. ಬಿ. ಸರೋಜಾದೇವಿಯವರು ಅಪ್ಪಟ ಕನ್ನಡದ ಪ್ರತಿಭೆ. ದೇಶದ ಎಲ್ಲಾ ಪ್ರಮುಖ ಭಾಷೆಯಲ್ಲಿ ನಟಿಸಿದ ಅವರು ಕನ್ನಡದ ಕುಮಾರ ತ್ರಯರೊಂದಿಗೆ ಅಭಿನಯಿಸಿದ ಅವರಲ್ಲಿ ಸೌಂದರ್ಯ ಪ್ರಜ್ಞೆ, ಉತ್ಕೃಷ್ಟ ನಡವಳಿಕೆ ಹಾಗೂ ಸೌಜನ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ” ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚೆನ್ನೇಗೌಡ ಮಾತನಾಡಿ “ಡಾ. ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ನಾಡಿನ ಅತ್ಯಂತ ಗೌರವಾನ್ವಿತ ಪ್ರಶಸ್ತಿ. ಇತರ ಯಾವುದೇ ಪ್ರಶಸ್ತಿಗಳನ್ನು ಈ ದತ್ತಿ ಪ್ರಶಸ್ತಿಯ ಜೊತೆ ಹೋಲಿಕೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಈ ಬಾರಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಬಿ. ಸರೋಜಾದೇವಿಯವರು ಪಂಚಭಾಷಾ ತಾರೆ, ನಟನೆಯಲ್ಲಿ ಅವರು ಸಾಕ್ಷಾತ್ ಶಾರದೆ. ಅಪ್ಪಟ ಕನ್ನಡದ ಪ್ರತಿಭೆಯನ್ನು ಗುರುತಿಸಿ ಈ ಡಾ. ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ನೀಡುತ್ತಿರುವುದು ಅಕ್ಷರಷಃ ಸ್ವಾಗತಾರ್ಹ” ಎಂದಿದ್ದಾರೆ.












