ಹರಿದ್ವಾರ: ಸುಮಾರು 5 ಶತಮಾನಗಳ ಇತಿಹಾಸ ಇರುವ ರಾಜಸ್ಥಾನದ ( ಮಹಾಭಾರತದ ತ್ರಿಗರ್ತದೇಶ) ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನದ ಪ್ರೇಮಪೀಠದ ( ಸಂತ ಮೀರಾಬಾಯಿ ಪರಂಪರೆ) ಆಚಾರ್ಯ ಲಲಿತ್ ಮೋಹನ್ ಓಜಾ ಅವರು ಹರಿದ್ವಾರದ ಪೇಜಾವರ ಶಾಖಾ ಮಠದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ರಾಜಸ್ತಾನದ ಸಾಂಪ್ರದಾಯಿಕ ಪೇಟಾ ತೊಡಿಸಿ ಗೌರವಿಸಿದರು.
ಉಡುಪಿ ಅಷ್ಟಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ಕ್ಷೇತ್ರವನ್ನು ಶ್ರೀ ಓಜಾರವರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಮಧ್ವಮತಪ್ರಸಾರಕಾರ್ಯ ನಡೆಸುತ್ತಿದ್ದಾರೆ. ಆದ್ದರಿಂದ ಉತ್ತರಭಾರತಕ್ಕೆ ಭೇಟಿಕೊಡುವ ಉಡುಪಿಯ ಸಮಸ್ತ ಕೃಷ್ಣ ಭಕ್ತರು ಅವಶ್ಯವಾಗಿ ಈ ಕ್ಷೇತ್ರಕ್ಕೆ ಭೇಟಿ ಕೊಡಬೇಕೆಂದು ಪೇಜಾವರ ಶ್ರೀಗಳು ಆಶಿಸಿದ್ದಾರೆ.
ಕನ್ಯಾಡಿ ಶ್ರೀರಾಮಕ್ಷೇತ್ರಕ್ಕೆ ಭೇಟಿ:
ಕನ್ಯಾಡಿ ಶ್ರೀರಾಮಕ್ಷೇತ್ರದ ಹರಿದ್ವಾರದ ಶಾಖೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಭೇಟಿ ನೀಡಿದರು.
ಕ್ಷೇತ್ರದ ವ್ಯವಸ್ಥಾಪಕ ನರೇಂದ್ರ ಜೀ ಅವರು ಶ್ರೀಗಳನ್ನು ಬರಮಾಡಿಕೊಂಡು ಭಕ್ತಿ ಗೌರವ ಸಮರ್ಪಿಸಿದರು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಶ್ರೀಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಶ್ರೀಗಳ ಭೇಟಿಯಿಂದ ಅತ್ಯಂತ ಸಂತೋಷವಾಗಿದೆ ಎಂದರು.
ಶ್ರೀಗಳು ಆಶ್ರಮವನ್ನು ನೋಡಿ ಅಲ್ಲಿನ ಪ್ರಶಾಂತ ವಾತಾವರಣದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು.