ರಾಜಸ್ಥಾನದ ಉದಯಪುರದಲ್ಲಿ 55 ವರ್ಷದ ಮಹಿಳೆಯೊಬ್ಬರು ಮಂಗಳವಾರ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬವು ತೀವ್ರ ಬಡತನ ಮತ್ತು ನಿರಾಶ್ರಿತತೆಯನ್ನು ಎದುರಿಸುತ್ತಿದೆ ಎಂದು ಕುಟುಂಬಸ್ಥರು ಸಹಾಯ ಬೇಡುತ್ತಿದ್ದಾರೆ.
ರೇಖಾ ಗಲಿಯಾ (55) ಈ ಹಿಂದೆ 16 ಮಕ್ಕಳಿಗೆ ಜನ್ಮ ನೀಡಿದ್ದರು ಮತ್ತು ಇತ್ತೀಚೆಗೆ ಅವರ 17 ನೇ ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಸ ಸಂಗ್ರಹಿಸುವ ಮೂಲಕ ಜೀವನ ಸಾಗಿಸುವ ಕಾವ್ರಾ ಮತ್ತು ರೇಖಾ ದಂಪತಿಗೆ ಜನಿಸಿದ 16 ಮಕ್ಕಳಲ್ಲಿ, ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಹುಟ್ಟಿದ ಕೂಡಲೇ ಸಾವನ್ನಪ್ಪಿದ್ದಾರೆ. ಇತರ ಐದು ಮಂದಿ ವಿವಾಹವಾಗಿದ್ದಾರೆ.
ಇತ್ತೀಚೆಗೆ ಆಸ್ಪತ್ರೆಗೆ ಹೋಗಿದ್ದ ರೇಖಾ, ತಾನು ನಾಲ್ಕನೇ ಗರ್ಭಧಾರಣೆಯಲ್ಲಿದ್ದೇನೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವೈದ್ಯರಿಗೆ ಸುಳ್ಳು ಹೇಳಿದ್ದಾರೆ. ನಂತರ ಇದು ಅವರಿಗೆ 17ನೇ ಮಗು ಎಂದು ಸತ್ಯ ತಿಳಿದ ವೈದ್ಯರು ಆಘಾತಕ್ಕೊಳಗಾದರು.
ಅವರ ಪುತ್ರಿ ಶಿಲಾ ಕಲ್ವೇಲಿಯಾ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಮನೆ ಇಲ್ಲ ಮತ್ತು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಸರ್ಕಾರವನ್ನು ಕೋರಿದರು.
ರೇಖಾ ಅವರ ಪತಿ ಕಾವ್ರಾ ಕಲ್ಲೇಲಿಯಾ ಕುಟುಂಬದ ಶೋಚನೀಯ ಸ್ಥಿತಿಯನ್ನು ವಿವರಿಸುತ್ತಾ, ಮಕ್ಕಳನ್ನು ಪೋಷಿಸಲು ಶೇ. 20 ರಷ್ಟು ಬಡ್ಡಿಗೆ ಸಾಲ ಪಡೆದಿದ್ದೇವೆ ಮತ್ತು ಸಾಲವು ಈಗ ಲಕ್ಷಾಂತರ ರೂಪಾಯಿಗಳನ್ನು ತಲುಪಿದೆ ಎಂದು ಹೇಳಿದರು.












