ರಾಜ್ಯದಲ್ಲಿ ನಾಳೆಯಿಂದ ಮಳೆ ಚುರುಕು, ಕರಾವಳಿಯ ಮೂರು ಜಿಲ್ಲೆಗಳಿಗೆ ಹಳದಿ ಅಲರ್ಟ್!

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 14 ಮತ್ತು 15ರಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಅಕ್ಟೋಬರ್ 19ರವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆಯಿದ್ದು, ನೈಋತ್ಯ ಮುಂಗಾರು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಮುಂದಿನ ಎರಡು ದಿನಗಳಲ್ಲಿ ಈಶಾನ್ಯ ಮಾರುತಗಳು ದಕ್ಷಿಣ ಭಾರತದ ಪ್ರದೇಶಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಿಂದ 19ರವರೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮೂಲಗಳು ತಿಳಿಸಿದೆ.