ಉಡುಪಿಯಲ್ಲಿ ಧಾರಾಕಾರ ಮಳೆ: ಚರಂಡಿಗೆ ಬಿದ್ದು ಮಹಿಳೆ ಸಾವು

ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಳೆ ಅಬ್ಬರಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಪುತ್ತೂರು ಗ್ರಾಮದ ಕುಕ್ಕುಂಜೆ ನಿವಾಸಿ ಗುಲಾಬಿ (60) ಎಂಬುವವರು ಆಕಸ್ಮಿಕವಾಗಿ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ನಿಟ್ಟೂರು- ಹನುಮಂತನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ:
ಸತತವಾಗಿ ಗಾಳಿ ಸಹಿತ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಸ್ವರ್ಣ, ಸೌಪರ್ಣಿಕಾ, ಸೀತಾ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶ ಹಾಗೂ ಕೃಷಿ ಗದ್ದೆಗಳು ಮಳೆ ನೀರಿನಿಂದ ಜಲಾವೃತಗೊಂಡಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೂರು ದಿನ ರೆಡ್ ಅಲರ್ಟ್:
ಜಿಲ್ಲೆಯಲ್ಲಿ ಧಾರಾಕಾರವಾಗಿ ಗಾಳಿಮಳೆ ಆಗುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಆ. 6ರಿಂದ 10ರ ವರೆಗೆ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ನದಿ, ಸಮುದ್ರ ತೀರಗಳಿಗೆ ತೆರಳದಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಧರೆಗುರುಳಿದ ವಿದ್ಯುತ್ ಕಂಬ, ಮರಗಳು:
ಮಳೆಯೊಂದಿಗೆ ವೇಗವಾಗಿ ಗಾಳಿಯು ಬೀಸುತ್ತಿದ್ದು, ಇದರಿಂದ ರಸ್ತೆ ಬದಿಯ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಮನೆಗಳಿಗೂ ಮರಗಳು ಉರುಳಿ ಬಿದ್ದಿದ್ದು, ಇದರಿಂದ ಅಪಾರ ಹಾನಿ ಸಂಭವಿಸಿದೆ.