ಮಂಗಳೂರು/ಉಡುಪಿ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉಭಯ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಬುಧವಾರ ಇಡೀ ದಿನ ಮೋಡ ಕವಿದ ವಾತಾವರಣವಿದ್ದು ಬೆಳಗ್ಗೆ ತುಂತುರು ಮಳೆಯಾಗಿತ್ತು. ಗುರುವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ.
ರಾಜ್ಯದಲ್ಲಿ ಒಂದು ವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜನವರಿ 4 ರಿಂದ 10 ರವರೆಗೆ ದಕ್ಷಿಣ ಒಳನಾಡು ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಜನವರಿ 8 ರಿಂದ 10 ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡದ ಹಲವು ಕಡೆ ಬುಧವಾರ ಬೆಳಿಗ್ಗೆ ಗುಡುಗು ಮಿಂಚು ಸಹಿತ ಮಳೆಯಾಗಿತ್ತು. ಗುರುವಾರ ಬೆಳಗ್ಗೆ ದ.ಕ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮೊದಲಾದೆಡೆ ಭಾರೀ ಮಳೆಯಾಗಿದ್ದು, ಮಂಗಳೂರು ನಗರದಲ್ಲಿಯೂ ಮಳೆಯಾಗಿತ್ತು. ಅಲ್ಲದೇ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಗುರುವಾರವೂ ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಮಳೆ ಸುರಿಯ ತೊಡಗಿದೆ. ಇನ್ನು ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.