ರಾಜ್ಯದಲ್ಲಿ ಮುಂದಿನ 24 ಗಂಟೆ ಮಳೆ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶ ಕ್ರಮೇಣ ವಾಯುವ್ಯ ಕಡೆಗೆ ಚಲಿಸಲಿದೆ. ಇದು ಸೈಕ್ಲೋನಿಕ್ ಚಂಡಮಾರುತದ ರೂಪವನ್ನು ತೆಗೆದುಕೊಳ್ಳುತ್ತದೆ. ತಮಿಳುನಾಡು, ಕೇರಳ ಮತ್ತು ಕರಾವಳಿ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ವಾರ ಮೋಡ ಕವಿದ ವಾತಾವರಣವಿತ್ತು. ಈ ವಾರ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಹೆಚ್ಚಾಗಿದೆ ಎಂದಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಉಂಟಾಗಿರುವ ಹಿನ್ನೆಲೆ ರಾಜ್ಯದಲ್ಲಿಯೂ ಭೀತಿ ಎದುರಾಗಿದೆ.ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತದ ಪರಿಣಾಮ ಡಿ. 7ರವರೆಗೆ ಕೂಡ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಚಂಡಮಾರುತ ಹೈ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ವಿಜ್ಞಾನಿ ಎ ಪ್ರಸಾದ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ರೈತರು ವ್ಯವಸಾಯದಲ್ಲಿ ಮತ್ತೆ ಸಕ್ರಿಯವಾಗುವಂತೆ ಮಾಡಿದೆ. ಆದರೆ ಈ ಬಾರಿ ಮಳೆ ಯಾವಾಗ ಬರುತ್ತದೆ? ಯಾವಾಗ ಹಠಾತ್ತನೆ ನಿಲ್ಲುತ್ತದೆ ಎಂದು ಹೇಳುವುದು ಕಷ್ಟವಾಗಿದೆ ಎಂದು ಹಲವು ಹವಾಮಾನ ತಜ್ಞರು ತಿಳಿಸಿದ್ದಾರೆ. ಕರುನಾಡಿನಲ್ಲಿ ಕೈಕೊಟ್ಟಿದ್ದ ಮುಂಗಾರು : ಕರುನಾಡಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಮುಂಗಾರು ಮಳೆ ಬರುತ್ತೆ ಎಂದು ರೈತರು ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಾ ಕುಳಿತಿದ್ದರು. ಆದರೆ ವರುಣ ಮಾತ್ರ ಕರುಣೆ ತೋರಲೇ ಇಲ್ಲ. ಆದರೆ ಈಗ ಚಳಿಗಾಲ ಆರಂಭವಾಗಿದ್ದು, ಆಗಾಗ ಜಿಟಿಜಿಟಿ ಮಳೆ ಜೊತೆ ಹಲವೆಡೆ ಜೋರಾದ ಮಳೆಯಿಂದ ಸಿಲಿಕಾನ್ ಸಿಟಿಯಲ್ಲಿ ತಂಪಾದ ವಾತಾವರಣವಿದೆ.

ಸಿಲಿಕಾನ್​ ಸಿಟಿಯಲ್ಲಿ ಮೋಡ ಕವಿದ ವಾತಾವರಣ : ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಕೂಡ ಬೀಳುತ್ತಿದೆ. ಇದರಿಂದ ಕೆಲಸಕ್ಕೆ ತೆರಳುವವರು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಕೂಡ ಉಂಟಾಗಿದೆ. ಇನ್ನು ಡಿಸೆಂಬರ್ 7ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

ಕರ್ನಾಟಕದಲ್ಲೂ ಎರಡು ದಿನ ಭಾರೀ ಮಳೆ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗುತ್ತಿದೆ. ಆಂಧ್ರ ಪ್ರದೇಶದ ಕರಾವಳಿಯಲ್ಲಿ ಸೈಕ್ಲೋನ್ ಹಿನ್ನೆಲೆ ಮೂರು ರಾಜ್ಯಗಳಿಗೆ ಕಟ್ಟೆಚ್ಚರ ನೀಡಲಾಗಿದೆ. ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ, ಮೂರು ರಾಜ್ಯಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ. ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಚಂಡಮಾರುತಕ್ಕೆ ಮೈಚುಂಗ್ ಎಂದು ಹೆಸರಿಸಲಾಗಿದೆ. ಗಂಟೆಗೆ 100 ಕಿ ಮೀ ವೇಗದಲ್ಲಿ ಮೈಚುಂಗ್ ಸಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಸೈಕ್ಲೋನ್ ತಟ್ಟಲಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.