ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ: ಕ್ರಿಸ್ಮಸ್, ಹೊಸ ವರ್ಷಕ್ಕೆ ವಿಶೇಷ ರೈಲುಗಳ ಸಂಚಾರ.

ಬೆಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದ್ದು ಸೌತ್ ವೆಸ್ಟರ್ನ್ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಹುಬ್ಬಳ್ಳಿ, ಬೆಂಗಳೂರು ಮತ್ತು ವಿಜಯಪುರವನ್ನು ಸಂಪರ್ಕಿಸುವ ವಿಶೇಷ ರೈಲು ಸಂಚಾರ ನಡೆಸಲಿದೆ.

ಕ್ರಿಸ್ಮಸ್​​ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಿದೆ. ರೈಲು ಸಂಖ್ಯೆ 07379 ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06277 ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ಮೂಲಕ ಬೆಳಿಗ್ಗೆ 9ಕ್ಕೆ ವಿಜಯಪುರ ತಲುಪಲಿದೆ.