ಕರಾವಳಿಯ ಜೀವನಾಡಿ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ಗೆ ರಜತ ಸಂಭ್ರಮ: ಉಡುಪಿ ನಿಲ್ದಾಣದಲ್ಲಿ ಸಂಭ್ರಮಾಚರಣೆ

ಉಡುಪಿ: ದಿ. ಜಾರ್ಜ್ ಫೆರ್ನಾಂಡೀಸ್ ಅವರ ಕನಸಿನ ಕೂಸು, ಅವಿಭಜಿತ ದ.ಕ ಜಿಲ್ಲೆಯನ್ನು ಒಂದುಗೂಡಿಸುವ ಕೊಂಕಣ ರೈಲ್ವೆಯ “ಮತ್ಸ್ಯ ಗಂಧಾ” ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ತನ್ನ ಓಡಾಟವನ್ನು 1998ರ ಮೇ 1ರಂದು ಪ್ರಾರಂಭಿಸಿತು. ಉಡುಪಿಯೂ ಕೂಡಾ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡು ರಜತ ಸಂಭ್ರಮವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಮತ್ಸ್ಯಗಂಧಾ ಎಕ್ಸ್‌ಪ್ರೆಸ್‌ ಕೂಡಾ 25 ವರ್ಷ ಪೂರ್ಣಗೊಳಿಸಿ ರಜತ ಮಹೋತ್ಸವವನ್ನು ಆಚರಿಸುತ್ತಲಿದೆ.

ಈ ದಿನವನ್ನು ಅವಿಸ್ಮರಣೀಯವಾಗಿಸಲು ಉಡುಪಿ ರೈಲು ಯಾತ್ರಿ ಸಂಘವು ಇದನ್ನು ವಿಶೇಷ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದು, ಮೇ 1ರಂದು ಮಧ್ಯಾಹ್ನ 3.48ಕ್ಕೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಉಡುಪಿಗೆ ಬರುವ ಹೊತ್ತಿನಲ್ಲಿ ರೈಲಿನ ಎಂಜಿನ್‌ ಎದುರುಗಡೆ ಸಂಘದ ಪರವಾಗಿ ಬ್ಯಾನರ್‌ ಒಂದನ್ನು ಕಟ್ಟಲಿದ್ದು, ರೈಲಿನ ಇಬ್ಬರು ಲೋಕೋ ಪೈಲೆಟ್‌ ಹಾಗೂ ಗಾರ್ಡ್‌ಗೆ ಹೂ ಗುಚ್ಛ ನೀಡಿ ನಂತರ ಸಿಹಿ ತಿಂಡಿ ವಿತರಣೆ ಮಾಡಿ ಆಚರಿಸಲಿದೆ ಎಂದು ಸಂಘದ ಅಧ್ಯಕ್ಷ ಶೇಖರ್‌ ಕೋಟ್ಯಾನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.