ಸೂರತ್: 2019ರ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ಮತ್ತು ಅಮಾನತು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 13 ರಂದು ಎರಡೂ ಕಡೆಯ ವಾದವನ್ನು ಆಲಿಸಿತ್ತು ಮತ್ತು ತೀರ್ಪನ್ನು ಏಪ್ರಿಲ್ 20 ಕ್ಕೆ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯವು ರಾಹುಲ್ ಗಾಂಧಿಯ ದೋಷಾರೋಪಣೆಯನ್ನು ತಡೆಹಿಡಿದಿದ್ದರೆ ಅಥವಾ ಅಮಾನತುಗೊಳಿಸಿದ್ದರೆ, ಕಾಂಗ್ರೆಸ್ ನಾಯಕ ಸಂಸತ್ತಿಗೆ ಮರುಪ್ರವೇಶಿಸಬಹುದಿತ್ತು.
ಕಾನೂನಿನಡಿಯಲ್ಲಿ ಇನ್ನೂ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಗಣಿಸುವುದನ್ನು ಪಕ್ಷವು ಮುಂದುವರಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
‘ಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕೆ ಸಾಮಾನ್ಯವಾಗಿದೆ’ ಎಂಬ ಹೇಳಿಕೆಯು ಇತರ ಹಿಂದುಳಿದ ವರ್ಗದವರಿಗೆ ಮಾಡಿದ ಅವಮಾನ ಎಂದು ರಾಹುಲ್ ಗಾಂಧಿ ಮೇಲೆ ಮಾನನಷ್ಟ ಪ್ರಕರಣ ಹೂಡಲಾಗಿತ್ತು. ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದ ನಂತರ, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವು ಅನರ್ಹಗೊಂಡಿತ್ತು. ಕೆಳ ನ್ಯಾಯಾಲಯದ ತೀರ್ಪಿಗೆ ತಡೆ ನೀಡುವಂತೆ ರಾಹುಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ರಾಹುಲ್ ಗಾಂಧಿ ಅವರ ಮನವಿಯನ್ನು ತಿರಸ್ಕರಿಸಿದೆ.
ತಮ್ಮ ಮೇಲ್ಮನವಿಯಲ್ಲಿ, ರಾಹುಲ್ ಗಾಂಧಿ ಅವರು ಗರಿಷ್ಠ ಶಿಕ್ಷೆಯ ಅಗತ್ಯವಿಲ್ಲ ಎಂದು ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಮ್ಯಾಜಿಸ್ಟ್ರೇಟ್ ಅವರ ತೀರ್ಪು “ವಿಚಿತ್ರವಾಗಿದೆ” ಏಕೆಂದರೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು “ದಾಖಲೆಯಲ್ಲಿರುವ ಎಲ್ಲಾ ಸಾಕ್ಷ್ಯಗಳನ್ನು ಗೊಂದಲಮಯ ಮಿಶ್ರಣ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಅವರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅವರ ಮನವಿಯನ್ನು ವಿರೋಧಿಸಿದ ದೂರುದಾರ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ಪುನರಾವರ್ತಿತ ಅಪರಾಧಿ ಮತ್ತು ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ ಎಂದು ಪ್ರತಿವಾದಿಸಿದ್ದರು.
ನ್ಯಾಯಾಲಯದ ತೀರ್ಪನ್ನು ಅಭಿನಂದಿಸಿರುವ ಭಾರತೀಯ ಜನತಾ ಪಕ್ಷ ಇದು ಸತ್ಯಕ್ಕೆ ಸಂದ ಜಯ ಎಂದಿದೆ.












