ಸ್ವಯಂಸೇವೆಯ ಭಾಗವಾಗಿ ಪಾತ್ರೆ ತೊಳೆದ ರಾಹುಲ್​ ಗಾಂಧಿ​ ಗೋಲ್ಡನ್​ ಟೆಂಪಲ್​ಗೆ ಭೇಟಿ

ಅಮೃತಸರ (ಪಂಜಾಬ್​) : ಕಾಂಗ್ರೆಸ್​ ನಾಯಕ, ಲೋಕಸಭೆ ಸಂಸದ ರಾಹುಲ್​ ಗಾಂಧಿ ಅವರು ಸೋಮವಾರ ಅಮೃತಸರದ ಪ್ರಸಿದ್ಧ ಗೋಲ್ಡನ್​ ಟೆಂಪಲ್​ಗೆ ಭೇಟಿ ನೀಡಿ, ಸ್ವಯಂಸೇವೆಯ ಭಾಗವಾಗಿ ಭಕ್ತರು ಬಳಸಿದ ಪಾತ್ರೆಗಳನ್ನು ತೊಳೆದರು.ಇದಕ್ಕೂ ಮೊದಲು ಸಿಖ್​ ಸಂಪ್ರದಾಯದಂತೆ ತಲೆಗೆ ನೀಲಿ ಬಣ್ಣದ ಬಟ್ಟೆ ಸುತ್ತಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಸಿಖ್ಖರ ಅತ್ಯುನ್ನತ ಸ್ಥಾನ ಅಕಾಲ್​ ತಕ್ತ್​ಗೆ ಭೇಟಿ ನೀಡಿದರು. ಇಂದು ರಾಹುಲ್​ ಇಲ್ಲಿ ನಡೆಯುವ ಫಲ್ಕಿ ಸೇವಾದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಪಂಜಾಬ್​ನ ಅಮೃತಸರದಲ್ಲಿರುವ ಸಿಖ್ಖರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಲ್ಡನ್​ ಟೆಂಪಲ್​ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೋಮವಾರ ಭೇಟಿ ನೀಡಿದರು.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಪ್ರಕಟಿಸಿರುವ ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ಅಮರಿಂದರ್​ ಸಿಂಗ್ ರಾಜಾ ವಾರಿಂಗ್​, ರಾಹುಲ್​ ಗಾಂಧಿ ಅವರು ನಗರಕ್ಕೆ ವೈಯಕ್ತಿಕವಾಗಿ ಭೇಟಿ ನೀಡಲಿದ್ದಾರೆ. ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್‌ನಲ್ಲಿ ನಮನ ಸಲ್ಲಿಸಲು ಅಮೃತಸರಕ್ಕೆ ಆಗಮಿಸಲಿದ್ದಾರೆ. ಇದು ಅವರ ವೈಯಕ್ತಿಕ,ಆಧ್ಯಾತ್ಮಿಕ ಭೇಟಿಯಾಗಿದೆ. ಅವರ ಖಾಸಗಿತನವನ್ನು ಗೌರವಿಸೋಣ ಎಂದು ಮನವಿ ಮಾಡಿದ್ದರು.

ಪಂಜಾಬ್​ ನ್ಯಾಯಾಲಯವು ಶಾಸಕ ಸುಖಪಾಲ್​ ಸಿಂಗ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 7 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಲ್ಲಿಸಿದ್ದ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ಸೆಪ್ಟೆಂಬರ್ 28ರಂದು ಕಾಂಗ್ರೆಸ್​ ಶಾಸಕ ಸುಖಪಾಲ್​ ಸಿಂಗ್​ ಅವರನ್ನು ಛತ್ತೀಸ್‌ಗಢದ ಅವರ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ಎನ್​ಡಿಪಿಎಸ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಖೈರಾ ಬಂಧನವನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆಪ್​ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿತ್ತು.

2024ರ ಲೋಕಸಭೆ ಚುನಾವಣೆಗೆ ಪಂಜಾಬ್‌ನಲ್ಲಿ ಆಪ್​​ ಜೊತೆ ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಗಳು ಕೇಳಿಬಂದಿವೆ. ಇದಕ್ಕೆ ಕಾಂಗ್ರೆಸ್​ ಪಕ್ಷದ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.ಡ್ರಗ್ಸ್​ ಪ್ರಕರಣದಲ್ಲಿ ಕಾಂಗ್ರೆಸ್​ ಶಾಸಕ ಸೆರೆ: 2015ರ ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್​ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪಂಜಾಬ್​ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ಇದರ ನಡುವೆಯೇ ರಾಹುಲ್​ ಗಾಂಧಿ ಪಂಜಾಬ್​ಗೆ ಭೇಟಿ ನೀಡಿದ್ದು ಕುತೂಹಲಕಾರಿಯಾಗಿದೆ.