ಕಾಂಗ್ರೆಸ್ ಮುಖಂಡ ಕಮಲನಾಥ್ ‘ಐಟಂ’ ಹೇಳಿಕೆಗೆ ರಾಹುಲ್ ಗಾಂಧಿ ಆಕ್ಷೇಪ

ತಿರುವನಂತಪುರಂ: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಬಿಜೆಪಿ ಅಭ್ಯರ್ಥಿ ಇಮಾರತಿ ದೇವಿ ವಿರುದ್ಧ ಕೀಳುಮಟ್ಟದ ಭಾಷೆ ಪ್ರಯೋಗಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ಇಂದು ಕೇರಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಲನಾಥ್‌ ಅವರು ನಮ್ಮದೇ ಪಕ್ಷದವರು. ಆದರೆ ವೈಯಕ್ತಿವಾಗಿ ಅವರು ಮಾಡಿರುವ ಪದ ಬಳಕೆಯ ಬಗ್ಗೆ ನನಗೆ ಆಕ್ಷೇಪವಿದೆ. ಅವರು ಯಾರೇ ಆಗಿದ್ದರೂ ಅಂಥ ಮಾತುಗಳನ್ನು ನಾನು ಒಪ್ಪುವುದಿಲ್ಲ. ಇದು ದುರದೃಷ್ಟಕರವಾದುದು’ ಎಂದಿದ್ದಾರೆ.

ದೇಶದಾದ್ಯಂತ ಭಾರಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಮಲನಾಥ್‌ ಅವರು, ನಾನು ಅಗೌರವ ತರುವ ಯಾವುದೇ ಮಾತುಗಳನ್ನು ಆಡಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಯಾರಾದರೂ ಇದು ಅಗೌರವಯುತ ಎಂದು ಭಾವಿಸಿದರೆ, ನಾನು ವಿಷಾದಿಸುತ್ತೇನೆ’ ಎಂದು ಕ್ಷಮೆ ಕೋರಿದ್ದಾರೆ.