ನವದೆಹಲಿ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣ ವಜಾಗೊಳಿಸಬೇಕು, ಅವರೊಬ್ಬ ಕ್ರಿಮಿನಲ್ ಶಿಕ್ಷಣ ಸಚಿವ, ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಶುಕ್ರವಾರ ಪೆಲೆಟ್ ಗನ್ ದಾಳಿಗೊಳಗಾದ ವಿದ್ಯಾರ್ಥಿಯನ್ನು ಜನರ ಮತ್ತು ಮಾಧ್ಯಮದ ಮುಂದೆ ತೋರಿಸಿದ್ದಾರೆ.
ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಗಾಯಗೊಂಡಿರುವ ಸಾಹಿಲ್ ಎಂಬ ವಿದ್ಯಾರ್ಥಿಯೊಂದಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ರಾಹುಲ್ ಗಾಂಧಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಮತ್ತು ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಆರೋಪಿಸಿದರು.
“ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನನ್ನ ಸಹೋದರನ ಕಣ್ಣಿಗೆ ಪೆಲೆಟ್ ಗನ್‌ನಿಂದ ಗುಂಡು ಹೊಡೆದಿದ್ದಾರೆ. ಈಗ ಆ ಕಣ್ಣಿನಿಂದ ಅವನಿಗೆ ಕಾಣುತ್ತಿಲ್ಲ,” ಎಂದು ಅವರು ಹೇಳಿದರು.

ಸಾಹಿಲ್ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಂದು ರಾಹುಲ್ ಗಾಂಧಿ ತಿಳಿಸಿದರು. ಗಾಯಗೊಂಡ ವಿದ್ಯಾರ್ಥಿಯ ಕಣ್ಣಿಗೆ ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಮತ್ತೊಂದು ಶಸ್ತ್ರಚಿಕಿತ್ಸೆಗೆ ಕಾಯುತ್ತಿದ್ದಾರೆ ಎಂದರು.
ಈ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಕಾರ ದಾಳಿ ನಡೆಸಿದೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಹೊಣೆಗಾರರಾದ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು,” ಎಂದು ಒತ್ತಾಯಿಸಿದರು.
ಇದೇ ವೇಳೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು “ಕ್ರಿಮಿನಲ್ ಶಿಕ್ಷಣ ಸಚಿವ” ಎಂದು ಟೀಕಿಸಿದ ರಾಹುಲ್ ಗಾಂಧಿ, ಅವರು ಭಾರತದ ಶಿಕ್ಷಣ ವ್ಯವಸ್ಥೆಯ ಕುಸಿತದ ಸಂಕೇತವಾಗಿದ್ದು, ತಕ್ಷಣವೇ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಗಾಯಗೊಂಡ ಸಾಹಿಲ್ ಅವರನ್ನು ಮೊದಲಿಗೆ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ, ಬಳಿಕ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಏಮ್ಸ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು.















