ರಾಹುಲ್​ ಗಾಂಧಿ ಜಾಲಿ ​ಬೈಕ್​ ರೈಡ್​ :ಲೇಹ್​ನಿಂದ ಪ್ಯಾಂಗಾಂಗ್​ ಸರೋವರದವರೆಗೆ

ಲೇಹ್ (ಲಡಾಖ್): ಬೈಕ್​ ರೈಡಿಂಗ್​ಗೆ ಪ್ರಸಿದ್ಧಿಯಾಗಿರುವ ಲಡಾಖ್​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಶನಿವಾರ ಬೈಕ್​ ಓಡಿಸಿ ಗಮನ ಸೆಳೆದರು. ಲಡಾಖ್​ ಪ್ರವಾಸದಲ್ಲಿರುವ ಕಾಂಗ್ರೆಸ್​ ಸಂಸದ ಕೆಟಿಎಂ 390 ಡ್ಯೂಕ್​ ಬೈಕ್​ ಅನ್ನು ಸವಾರಿ ಮಾಡಿದರು. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಅವರು ಲೇಹ್​ನಿಂದ ಪ್ಯಾಂಗಾಂಗ್​ ಸರೋವರದವರೆಗೆ ಡ್ಯೂಕ್​ ಬೈಕ್​ ಓಡಿಸಿದರು.

ಭಾನುವಾರ ಪ್ಯಾಂಗಾಂಗ್ ಸರೋವರದಲ್ಲಿ ನಡೆಯುವ ರಾಜೀವ್ ಗಾಂಧಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಕಾರ್ಗಿಲ್‌ಗೆ ಭೇಟಿ ನೀಡಿ ಅಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಆರು ದಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ರಾಹುಲ್​ ಪಕ್ಷದ ಮುಖಂಡರೊಂದಿಗೆ ಬೈಕ್‌ಗಳಲ್ಲಿ ಸಂಚರಿಸಿದ್ದರು. ಈ ಹಿಂದೆ ತಮಗೂ ಕೂಡ ಬೈಕ್​ ಕ್ರೇಜ್​ ಇದ್ದು, ಭದ್ರತಾ ಕಾರಣಗಳಿಗಾಗಿ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.ಪ್ಯಾಂಗಾಂಗ್​ ಸರೋವರದಲ್ಲಿ ರಾಜೀವ್ ​ಗಾಂಧಿಗೆ ಪೂಜೆ: ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಭಾನುವಾರ ತಮ್ಮ ತಂದೆ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ಯಾಂಗಾಂಗ್​ ಸರೋವರದಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಜೀವ್​ ಗಾಂಧಿ ಅವರು ಲಡಾಖ್​ ಪ್ರದೇಶವನ್ನು ಬಹುವಾಗಿ ಇಷ್ಟಪಟ್ಟ ಪ್ರದೇಶವಾಗಿತ್ತು. ಹೀಗಾಗಿ ಅವರು ಇಲ್ಲೇ ಪೂಜೆ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.