ಆಸ್ತಿ ವಿವರ ಬಹಿರಂಗ ಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ವಯನಾಡ್ ಸಂಸದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರದಂದು ಕೇರಳದ ವಯನಾಡ್ ಕ್ಷೇತ್ರದಿಂದ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ.

ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ರಾಹುಲ್ ಬಳಿ 4.3 ಕೋಟಿ ರೂ ಮೌಲ್ಯದ ಷೇರು ಮಾರುಕಟ್ಟೆ ಹೂಡಿಕೆ, 3.81 ಕೋಟಿ ರೂ ನ ಮ್ಯೂಚುವಲ್ ಫಂಡ್ ಠೇವಣಿ ಮತ್ತು ಬ್ಯಾಂಕ್ ಖಾತೆಯಲ್ಲಿ 26.25 ಲಕ್ಷ ರೂ. ಹೊಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

2022-23ರ ಹಣಕಾಸು ವರ್ಷದಲ್ಲಿ ರಾಹುಲ್ ಗಾಂಧಿ 55,000 ನಗದು ಮತ್ತು ಒಟ್ಟು 1,02,78,680 ಆದಾಯ ಹೊಂದಿದ್ದಾರೆ ಎಂದು ಅಫಿಡವಿಟ್ ತೋರಿಸುತ್ತದೆ.

ಅಫಿಡವಿಟ್ ಪ್ರಕಾರ, ಐದು ವರ್ಷಗಳಲ್ಲಿ ರಾಹುಲ್ ಗಾಂಧಿಯವರ ಒಟ್ಟು ಚರ ಆಸ್ತಿಯ ಒಟ್ಟು ಮೌಲ್ಯವು ಶೇಕಡಾ 59 ರಷ್ಟು ಹೆಚ್ಚಾಗಿದೆ ಎಂದು Onmanorama.com ವರದಿ ಮಾಡಿದೆ.

2019 ರಲ್ಲಿ ರಾಹುಲ್ ಗಾಂಧಿ ಅವರ ಚರ ಆಸ್ತಿಯ ಮೌಲ್ಯ 5.8 ಕೋಟಿಯಾಗಿದ್ದರೆ, ಇತ್ತೀಚಿನ ಅಫಿಡವಿಟ್‌ನಲ್ಲಿ ಚರ ಆಸ್ತಿಯ ಮೌಲ್ಯ 9.24 ಕೋಟಿಯಾಗಿದೆ.

15.2 ಲಕ್ಷ ಮೌಲ್ಯದ ಚಿನ್ನದ ಬಾಂಡ್‌, ರಾಷ್ಟ್ರೀಯ ಉಳಿತಾಯ ಯೋಜನೆಗಳು, ಅಂಚೆ ಉಳಿತಾಯ, ವಿಮಾ ಪಾಲಿಸಿಗಳು ಸೇರಿದಂತೆ 61.52 ಲಕ್ಷ ಮೌಲ್ಯದ ಹೂಡಿಕೆ ಮಾಡಿದ್ದಾರೆ. ಸುಮಾರು 49.7 ಲಕ್ಷ ಭಾದ್ಯತೆಯನ್ನು ಹೊಂದಿದ್ದಾರೆ.

ರಾಹುಲ್ ಗಾಂಧಿ ವಾರ್ಷಿಕ 1 ಕೋಟಿಗೂ ಹೆಚ್ಚು ಆದಾಯದೊಂದಿಗೆ 20 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ನ್ಯೂಸ್ 18, ಅಫಿಡವಿಟ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ.

ರಾಹುಲ್ ಗಾಂಧಿ ದೆಹಲಿಯ ಮೆಹ್ರೌಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜಂಟಿ ಮಾಲೀಕತ್ವದ ಕೃಷಿ ಭೂಮಿ ಮತ್ತು ಗುರುಗ್ರಾಮ್‌ನಲ್ಲಿ 11 ಕೋಟಿ ಮೌಲ್ಯದ ಕಚೇರಿ ಸ್ಥಳವನ್ನು ಘೋಷಿಸಿದ್ದಾರೆ.