ನಿತೀಶ್ ಕುಮಾರ್ ಗೆ ಕರೆ ಮಾಡಿದ ರಾಹುಲ್ ಗಾಂಧಿ : ಪ್ರಧಾನಿ ಹುದ್ದೆಗೆ ಖರ್ಗೆ ಹೆಸರು ಪ್ರಸ್ತಾವ

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳ INDIA ಮೈತ್ರಿಕೂಟದಲ್ಲಿ ಮತ್ತಷ್ಟು ಬಿಕ್ಕಟ್ಟುಗಳು ತಲೆದೂರಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಿಗೇ ಗುರುವಾರ ಸಂಜೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

ಈ ಇಬ್ಬರು ಇಂದು ಸಂಜೆ ಮಾತುಕತೆ ನಡೆಸುವ ನಿರೀಕ್ಷೆ ಇದೆ. ರಾಹುಲ್ ಗಾಂಧಿ ಕರೆಯ ಕಾರ್ಯಸೂಚಿ ಏನು ಎಂಬುದು ಈವರೆಗೆ ತಿಳಿದು ಬಾರದಿದ್ದರೂ, ಬುಧವಾರ ನಡೆದ INDIA ಮೈತ್ರಿಕೂಟದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು INDIA ಮೈತ್ರಿಕೂಟದ ಸಂಚಾಲಕ ಅಥವಾ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬಹುದು ಎಂಬ ನಿರೀಕ್ಷೆಯು ಬದಿಗೆ ಸರಿದಿರುವ ಕುರಿತು ಚರ್ಚೆಯಾಗಬಹುದು ಎಂಬ ಊಹಾಪೋಹಗಳಿವೆ.

ರಾಹುಲ್ ಗಾಂಧಿ ಕರೆ ಮಾಡಿದಾಗ ಸಂಯುಕ್ತ ಜನತಾದಳದ ಮುಖ್ಯಸ್ಥರಾದ ನಿತೀಶ್ ಕುಮಾರ್ ಸಭೆಯೊಂದರಲ್ಲಿ ಮಗ್ನರಾಗಿದ್ದರು ಹಾಗೂ ನಿತೀಶ್ ಕುಮಾರ್ ಕುಮಾರ್ ಅವರು ವಿಶ್ರಾಂತರಾಗಿದ್ದಾಗ, ರಾಹುಲ್ ಗಾಂಧಿ ಪಕ್ಷದ ಸಭೆಯೊಂದರಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

INDIA ಮೈತ್ರಿಕೂಟಕ್ಕೆ ಭಾರತ್ ಎಂದು ಮರು ನಾಮಕರಣ ಮಾಡುವ ಪ್ರಸ್ತಾವವೂ ಸೇರಿದಂತೆ ಬುಧವಾರ ನಡೆದ ಸಭೆಯಲ್ಲಿನ ಹಲವಾರು ವಿಷಯಗಳ ಕುರಿತು ನಿತೀಶ್ ಕುಮಾರ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಸ್ತಾವವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡಾ ತಕ್ಷಣವೇ ತಳ್ಳಿ ಹಾಕಿದ್ದರು.ಈ ನಡುವೆ, INDIA ಮೈತ್ರಿಕೂಟಕ್ಕೆ ಆಗಬಹುದಾದ ಹಾನಿಯನ್ನು ಸರಿಪಡಿಸುವ ಭಾಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದರೆ, ರಾಹುಲ್ ಗಾಂಧಿ ಅವರು ಎನ್‍ಸಿಪಿ ವರಿಷ್ಠ ಶರದ್ ಪವಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಮೈತ್ರಿಕೂಟದ ಪಕ್ಷಗಳೊಂದಿಗೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನು ಎದುರಿಸಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಛತ್ತೀಸ್ ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು.

ಈ ಕುರಿತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಹಿರಂಗ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.ನವೆಂಬರ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ತೋರಿರುವುದರಿಂದ ಮತದಾರರನ್ನು ಸೆಳೆಯುವ INDIA ಮೈತ್ರಿಕೂಟದ ಪ್ರಯತ್ನವೂ ನಿರರ್ಥಕವಾಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ನಿತೀಶ್ ಕುಮಾರ್ ತರಾಟೆಗೆ ತೆಗೆದುಕೊಂಡರು ಎಂಬ ಮಾತುಗಳೂ ಕೇಳಿ ಬಂದಿವೆ.