ದುಬೈ: ಅರಬ್ ಸಂಯುಕ್ತ ರಾಷ್ಟ್ರದ ದುಬೈಯಲ್ಲಿ ಜರಗಿದ ರಾಹುಲ್ ದ್ರಾವಿಡ ಕ್ರಿಕೆಟ್ ಪಂದ್ಯಾವಳಿಯು ಉತ್ಕೃಷ್ಟ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ, ದಾಖಲೆ ಸಂಖ್ಯೆಯ ವೀಕ್ಷಕರು ಹಾಗೂ ವಿನೂತನ ದಾಖಲೆಗಳೊಂದಿಗೆ ಹೀಗಿಲ್ಲ ಎನ್ನುವ ರೀತಿಯಲಿ ಸಮಾಪನಗೊಂಡಿತು.
ರಾಹುಲ್ ದ್ರಾವಿಡರ ಮಹಾನ್ ಅಭಿಮಾನಿ ಉಡುಪಿ ಸೂರಾಲು ಮೂಲದ ವಿಠಲ ರಿಶಾನ್ ನಾಯಕ್ ಸಾರಥ್ಯದಲ್ಲಿ ಈಗ್ಗೆ ಎರಡು ತಿಂಗಳ ಹಿಂದೆ ಆರಂಭಗೊಂಡ 16 ಪ್ರತಿಭಾವಂತ ಆಹ್ವಾನಿತ ಕ್ರಿಕೆಟ್ ತಂಡಗಳ ಪಂದ್ಯಾಕೂಟದ ಅಂತಿಮ ಪಂದ್ಯವು 3-8-2025ರ ಭಾನುವಾರ ಶಾರ್ಜಾದ ಅಜ್ಮಾನ್ ಮೈದಾನದಲ್ಲಿ ಸಂಪನ್ನಗೊಂಡಿತು.
ಸೆಮಿಪೈನಲ್:
ಫೈನಲಗೂ ಮುನ್ನ ಜರಗಿದ ಸೆಮಿಫೈನಲನ ಮೊದಲ ಪಂದ್ಯವು ಸ್ಪೈಕರ್ಸ್ ಇಲೆವೆನ್ ಹಾಗೂ ಬ್ಲೂ ಸ್ಕೈ ಇಲೆವೆನ್ ವಿರುದ್ಧ ಜರಗಿತು. ಮೊದಲು ಬ್ಯಾಟ ಮಾಡಿದ ಸ್ಪೈಕರ್ಸ್ ತಂಡವು 15ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 168ರನ್ ಗಳಿಸಿತು. ಸ್ಪೈಕರ್ಸ್ ತಂಡದ ಬೀಸುದಾಂಡಿಗ ಅಜರ್ 7ಸಿಕ್ಸರ್ 3ಬೌಂಡರಿಯೊಂದಿಗೆ ಕೇವಲ 31ಚೆಂಡುಗಳಲ್ಲಿ 65 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.ಈ ಮೊತ್ತವನ್ನು ಬೆಂಬತ್ತಿದ ಬ್ಲೂಸ್ಕೈ ಇಲೆವೆನ್ ತಂಡವು ಉತ್ತಮ ಪ್ರತಿಹೋರಾಟವನ್ನು ನೀಡುವ ಲಕ್ಷಣ ಕಂಡುಬಂದರೂ ಅಂತಿಮವಾಗಿ 145 ರನ್ನುಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿತು. ಸ್ಪೈಕರ್ಸ್ ತಂಡವು 23 ರನ್ನುಗಳಿಂದ ಫೈನಲಗೆ ಲಗ್ಗೆ ಇಟ್ಟಿತು. ಅಮೋಘ 65ರನ್ ಸಿಡಿಸಿದ ಸ್ಪೈಕರ್ಸ್ ತಂಡದ ಅಜರ್ ಪಂದ್ಯ ಪುರುಷೋತ್ತಮನಾಗಿ ಆಯ್ಕೆಯಾದರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಡ್ಸಕ್ಲಬ್ ದುಬೈ ತಂಡವು ಟೀಮ್ ಲಿವಿಂಗಸ್ಟೋನ್ ತಂಡದ ವಿರುದ್ಧ ಮೊದಲು ಬ್ಯಾಟ್ ಮಾಡಿತು.ಆದರೆ ಲಿವಿಂಗಸ್ಟೋನ್ ತಂಡದ ಮಾರಕ ದಾಳಿಗೆ ತತ್ತರಿಸಿದ ಫ್ರೆಂಡ್ಸ್ ಕ್ಲಬ್ ತಂಡವು 12.4 ಓವರಗಳಲ್ಲಿ 99 ರನ್ನಿಗೆ ಎಲ್ಲಾ ವಿಕೆಟುಗಳನ್ನು ಕಳೆದುಕೊಂಡಿತು.
ಲಿವಿಂಗಸ್ಟೋನ್ ತಂಡವು ನಿರಾಯಾಸದಿಂದ ಕೇವಲ 9.2 ಓವರಗಳಲ್ಲಿ ಮೂರು ವಿಕೆಟುಗಳನ್ನು ಕಳೆದುಕೊಂಡು ಗುರಿ ತಲುಪಿ ಫೈನಲಗೆ ಪ್ರವೇಶಿಸಿತು.ಲಿವಿಂಗಸ್ಟೋನ್ ತಂಡದ ರಮೇಶ ರಸಿನ್ 1ಸಿಕ್ಸರ್ ಸೇರಿದಂತೆ 21 ಚೆಂಡುಗಳಲ್ಲಿ 30ರನ್ ಬಾರಿಸಿದ್ದು ಮಾತ್ರವಲ್ಲ ಎದುರಾಳಿ ತಂಡದ 2 ಅಮೂಲ್ಯ ವಿಕೆಟುಗಳನ್ನು ಪಡೆಯುವುದರ ಮೂಲಕ ಪಂದ್ಯದ ವ್ಯಕ್ತಿಯಾಗಿ ಬಹುಮಾನಿತರಾದರು.
ಫೈನಲ್:
ಫೈನಲ ಪಂದ್ಯವನ್ನು ಶಾರ್ಜಾದ ಪ್ರಸಿದ್ಧ ಅಜ್ಮಾನ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಅರಬ್ ಸಂಯುಕ್ತ ರಾಷ್ಟ್ರದ ಪ್ರಮುಖ ಎರಡು ಪ್ರತಿಭಾವಂತ ತಂಡಗಳಾದ ಸ್ಪೈಕರ್ಸ್ ಇಲೆವೆನ್ ಹಾಗೂ ಲಿವಿಂಗ್ ಸ್ಟೋನ್ ತಂಡಗಳ ನಡುವೆ ಸೆಣಸಾಟ ಜರಗಿತು. ಮೊದಲು ಬ್ಯಾಟ್ ಮಾಡಿದ ಸ್ಪೈಕರ್ಸ್ ಇಲೆವೆನ್ 15 ಓವರಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 175 ರನ್ನುಗಳ ಬೃಹತ್ ಮೊತ್ತ ಪೇರಿಸಿತು.
ಸೆಮಿಫೈನಲಿನಲ್ಲಿ ತಂಡಕ್ಕೆ ಆಸರೆಯಾಗಿದ್ದ ತಂಡದ ಹೊಡಬಡಿಯ ಬೀಸುದಾಂಡಿಗ ಅಜರ್ ಮತ್ತೆ ನಿರ್ಣಾಯಕ ಫೈನಲ್ ಪಂದ್ಯದಲ್ಲಿ45 ಚೆಂಡುಗಳಲ್ಲಿ 9 ಮೇಘಸ್ಪರ್ಶಿ ಸಿಕ್ಸರ್ ಹಾಗೂ2 ಕಲಾತ್ಮಕ ಬೌಂಡರಿಯೊಂದಿಗೆ ಸಿಡಿಲಬ್ಬರದ 90ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಈ ಮೊತ್ತವನ್ನು ತಲುಪುವ ಯತ್ನದಲ್ಲಿ ಲಿವಿಂಗಸ್ಟೋನ್ ತಂಡವು ಎದುರಾಳಿ ಸ್ಪೈಕರ್ಸ್ ತಂಡದ ನಿಖರದಾಳಿ ಹಾಗೂ ಶಿಸ್ತುಬದ್ಧ ಕ್ಷೇತ್ರರಕ್ಷಣೆಗೆ ತಲೆಬಾಗಿ ಹೆಚ್ಚಿನ ಪ್ರತಿರೋಧ ತೋರದೆ 13.1ಓವರಗಳಲ್ಲಿ 114 ರನ್ನುಗಳಿಗೆ ಪತನಗೊಂಡಿತು. ಸ್ಪೈಕರ್ಸ್ ತಂಡವು 61ರನ್ನುಗಳ ಅಂತರದಲ್ಲಿ ವಿಜಯಲಕ್ಷ್ಮಿಯನ್ನು ವರಿಸಿ ಮೊತ್ತಮೊದಲ ಭಾರಿಗೆ ದುಬೈಯಲ್ಲಿ ಜರಗಿದ ಐತಿಹಾಸಿಕ ರಾಹುಲ್ ದ್ರಾವಿಡ್ ಕ್ರಿಕೆಟ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಪ್ರಶಸ್ತಿ ಪ್ರದಾನ:
ವಿಜೇತ ಸ್ಪೈಕರ್ಸ್ ತಂಡದ ನಾಯಕ ಇಲಿಯಾಸ್ ರವರು ಮಿರಮಿರನೆ ಮಿಂಚುವ ರಾಹುಲ್ ದ್ರಾವಿಡ್ ಲಾಂಛನದ ಮಿಸ್ಟರ್ ರಾಹುಲ್ ದ್ರಾವಿಡ್ ಟ್ರೋಫಿ, ನಗದು 4007 ಎ.ಇ.ಡಿ.,ಪ್ರಮಾಣ ಪತ್ರ ಹಾಗೂ ಆಕರ್ಷಕ ಪಾರಿತೋಷಕವನ್ನು ವಿದ್ಯಾನಂದ ಶೆಟ್ಟಿ ಹಾಗೂ ಉದಯ ಶೆಟ್ಟಿಯವರಿಂದ ಸ್ವೀಕರಿಸಿ ವಿಶೇಷವಾಗಿ ಅಭಿನಂದಿತರಾದರು.
ದ್ವಿತೀಯ ಸ್ಥಾನಿ ಲಿವಿಂಗಸ್ಟೋನ್ ತಂಡದ ಕಪ್ತಾನ ದಿಲ್ಶನ್ ರವರು 2507 ಎ.ಇ.ಡಿ.ನಗದು ಪ್ರಶಸ್ತಿಪತ್ರ, ಸ್ಮರಣಿಕೆಯನ್ನು ಕಾರ್ಯಕ್ರಮದ ಮುಖ್ಯ ಅಭ್ಯಾಗತರಾದ ಟಿಕ್ ಟಾಕ್ ಸಂಸ್ಥೆಯ ಮಿಸ್ ಸರಿತಾ ಮಿರಾಂಡಾ ಹಾಗೂ ಪಂದ್ಯಾವಳಿಯ ಆಯೋಜಕರಾದ ವಿಠಲ್ ರಿಶಾನ್ ನಾಯಕರಿಂದ ಸ್ವೀಕರಿಸಿದರು.
ಅತಿಥಿ ಅಭ್ಯಾಗತರು:
ಪ್ರಶಸ್ತಿಪ್ರದಾನ ಸಮಾರಂಭದಲ್ಲಿದ್ದ ವಿದ್ ಒನ್ ಆಯಿಲ್ ಮನ್ಯೂಫ್ಯಾಕ್ಚರರ್ ಸಂಸ್ಥೆಯ ವಿದ್ಯಾನಂದ ಶೆಟ್ಟಿ, ರೇಂಜರ್ಸ್ ಸಂಸ್ಥೆಯ ಉದಯ ಶೆಟ್ಟಿ ಹಾಗೂ ಟಿಕ್ ಟಾಕ್ ಸಂಸ್ಥೆಯ ಸೆಲೆಬ್ರಿಟಿ ಮಿಸ್ ಸರಿತಾ ಮಿರಾಂಡಾರವರು ಪಂದ್ಯಾವಳಿಯ ವೈಭವ, ಸಂಭ್ರಮ, ಅಚ್ಚುಕಟ್ಟಾದ ಸುವ್ಯವಸ್ಥೆಯ ಬಗ್ಗೆ ಮೆಚ್ಚುಗೆ ಹರಿಸಿದರು. ಹಾಗೂ ಪಂದ್ಯಾವಳಿಯ ಪರಿಪೂರ್ಣ ಯಶಸ್ಸಿಗೆ ಸಮರೋಪಾದಿಯಲ್ಲಿ ಶ್ರಮಿಸಿದ ರಾಹುಲ್ ದ್ರಾವಿಡ್ ಕಪ್ ಆಯೋಜಕ ವಿಠಲ್ ನಾಯಕರನ್ನು ತುಂಬುಕಂಠದಿಂದ ಶ್ಲಾಘಿಸಿದರು. ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಸ್ಪೋರ್ಟ್ಸ್ ಕನ್ನಡ ಕ್ರೀಡಾವಾಹಿನಿಯ ಸ್ಥಾಪಕ ಶ್ರೀರಾಮಕೃಷ್ಣ ಆಚಾರ್ಯ ಹಾಗೂ ಉಡುಪಿಯ ಶೈಕ್ಷಣಿಕ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ನ ಪಿ.ಲಾತವ್ಯ ಆಚಾರ್ಯ ಪ್ರಾಯೋಜಿತ ಬಹುಮಾನವನ್ನು ವಿಠಲ್ ನಾಯಕರು ವಿಜೇತರಿಗೆ ನೀಡಿದರು.
ವೈಯುಕ್ತಿಕ ಪ್ರಶಸ್ತಿ:
ಮಿಸ್ಟರ್ ರಾಹುಲ್ ದ್ರಾವಿಡ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಶರವೇಗದ 90 ರನ್ ಬಾರಿಸಿ ಸ್ಪೈಕರ್ಸ್ ತಂಡದ ವಿಜಯಧ್ವಜ ಹಾರಿಸುವಲ್ಲಿ ನೆರವಾದ ಬೀಸುದಾಂಡಿಗ ಅಜರ್ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ಪಂದ್ಯಾವಳಿಯ ಶ್ರೇಷ್ಠ ಆಟಗಾರನಾಗಿ ಲಿವಿಂಗಸ್ಟೋನ್ ತಂಡದ ರಮೇಶ್ ರಸಿನ್ ಪುರಸ್ಕೃತರಾದರು.
ಸ್ಪೈಕರ್ಸ್ ತಂಡದ ಅಹಮದ್ ಮನೊ ಪಂದ್ಯಾವಳಿಯಲ್ಲಿ ಒಟ್ಟು13 ವಿಕೆಟುಗಳನ್ನು ಕನಿಷ್ಠ ರನ್ ಸರಾಸರಿಯಲ್ಲಿ ಪಡೆಯುವ ಮೂಲಕ ಅತ್ಯುತ್ತಮ ಎಸೆತಗಾರ ಪ್ರಶಸ್ತಿ ಪಡೆದರು. ಪಂದ್ಯಾಕೂಟದ ಅತ್ಯಂತ ಶಿಸ್ತುಬದ್ಧ ತಂಡವೆಂಬ ಹಿರಿಮೆಯ ಪ್ರಶಸ್ತಿಯು ಓ.ಜಿ.ಎಸ್ ಮೆಡಿಕಲ್ ಇಲೆವೆನ್ ತಂಡಕ್ಕೆ ಪ್ರಾಪ್ತವಾಯಿತು. ಪಂದ್ಯಾವಳಿಯುದ್ದಕ್ಕೂ ನಿರ್ಣಾಯಕರಾಗಿ ಉತ್ಕೃಷ್ಟ ಗುಣಮಟ್ಟದ ನಿಖರ ನಿರ್ಣಯ ಪ್ರದರ್ಶಿಸಿ ಆಟಗಾರರ ಮೆಚ್ಚುಗೆಗೆ ಪಾತ್ರರಾದ ಶಕೀರ್ ಶೇಕ್ ವಿಟ್ಲ,ಲೆಸ್ಲಿ, ಹಮ್ದಾನ್ ಹಾಗೂ ವೀಕ್ಷಕ ವಿವರಣೆಯಲ್ಲಿ ಸಕಾಲಿಕವಾದ ವಿಷಯ ವಿಚಾರ, ವಾಕ್ಚಾತುರ್ಯದೊಂದಿಗೆ ಪ್ರೇಕ್ಷಕವರ್ಗವನ್ನು ಸೆಳೆದ ಅಶ್ರಫ ಪೆರುವಾಳ, ಆದಿತ್ಯ ಆರ್ ಪಡೀಲ್ ಮಂಗಳೂರು ಹಾಗೂ ಕ್ಲೀವನರನ್ನು ಹೃತ್ಪೂರ್ವಕವಾಗಿ ಗೌರವಿಸಲಾಯಿತು.
ವಿನೂತನ ದಾಖಲೆಗಳು:
ವಿಠಲ ರಿಶಾನ ನಾಯಕರ ನೇತೃತ್ವದಲ್ಲಿ ಸಂಯೋಜಿಸಲ್ಪಟ್ಟ ರಾಹುಲದ್ರಾವಿಡ್ ಕ್ರಿಕೆಟ್ ಪಂದ್ಯಾವಳಿಯು ಅರಬ್ ಸಂಯುಕ್ತ ರಾಷ್ಟ್ರದಲ್ಲಿ ಇತ್ತೀಚಿನ ದಶಕದಲ್ಲಿ ಆಯೋಜನೆಗೊಂಡ ಅತ್ಯುತ್ತಮ ಪಂದ್ಯಾಕೂಟವೆಂದು ಸಾರ್ವತ್ರಿಕವಾಗಿ ಜನಮನ್ನಣೆ ಗಳಿಸಿರುವುದು ಈ ಪಂದ್ಯಾವಳಿಯ ವಿಶೇಷತೆ. ಈ ಮಾತಿಗೆ ನಿದರ್ಶನ ಎನ್ನುವಂತೆ ರಾಹುಲ್ ದ್ರಾವಿಡ್ ಕಪ್ ಫೈನಲಪಂದ್ಯವನ್ನು ಜಾಲತಾಣದ ನೇರಪ್ರಸಾರದಲ್ಲಿ ವಿಶ್ವಾದ್ಯಂತ 22,600ಕ್ಕೂ ಮಿಕ್ಕಿ ಕ್ರೀಡಾಪ್ರೇಮಿಗಳು ವೀಕ್ಷಿಸಿರುವುದು ದುಬೈ ಟೆನಿಸ್ ಬಾಲ್ ಕ್ರೀಡಾಕೂಟದ ಇತಿಹಾಸದಲ್ಲಿ ನೂತನ ದಾಖಲೆ. ಅಂತೆಯೇ ಈ ಪಂದ್ಯಾವಳಿಯಲ್ಲಿ ಹೊಮ್ಮಿದ ಗರಿಷ್ಠ ವೇಗದ ಶತಕ, ಶತಕಾರ್ಧ,ತಂಡದ ಗರಿಷ್ಠ ಮೊತ್ತ,ಗರಿಷ್ಠ ಸಿಕ್ಸರ್,ಬೌಂಡರಿ ಸೇರಿದಂತೆ ಅನೇಕ ನೂತನ ದಾಖಲೆಗಳು ಈ ರಾಹುಲ್ ದ್ರಾವಿಡ್ ಪಂದ್ಯಾಕೂಟದ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.
ಅಭಿನಂದನೆ:
ದುಬೈನಲ್ಲಿ ನೆಲೆಸಿರುವ ಅನೇಕ ಕ್ರೀಡಾಪ್ರತಿಭೆಗಳ ಕ್ರೀಡಾಸಾಮರ್ಥ್ಯಕ್ಕೆ ಪ್ರತಿಷ್ಠಿತ ವೇದಿಕೆ ಕಲ್ಪಿಸಿದ ವಿಠಲ್ ರಿಶಾನ್ ನಾಯಕರಿಗೆ ಹಾಗೂ ಅವರ ದಿವ್ಯಸಾರಥ್ಯದಲ್ಲಿ ಸಂಪನ್ನಗೊಂಡ ಮಿಸ್ಟರ್ ರಾಹುಲ್ ದ್ರಾವಿಡ್ ಕಪ್ ಪಂದ್ಯಾಕೂಟಕ್ಕೆ ಹೃತ್ಪೂರ್ವಕ ಅಭಿನಂದನೆಗಳು.












