udupixpress
Home Trending ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕಿಣಿ ಅಧಿಕಾರ ಸ್ವೀಕಾರ

ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕಿಣಿ ಅಧಿಕಾರ ಸ್ವೀಕಾರ

ಉಡುಪಿ, ಜೂ29:  ಉಡುಪಿ ನಗರದಲ್ಲಿ, ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ರಾಜ್ಯಕ್ಕೆ ಮಾದರಿಯಾದ ವ್ಯವಸ್ಥಿತ ಲೇಔಟ್ ನಿರ್ಮಾಣ ಮಾಡಲಾಗುವುದು ಎಂದು ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದ್ದಾರೆ.

ಅವರು ಸೋಮವಾರ, ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಕಚೇರಿಯಲ್ಲಿ, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ನಗರಾಭಿವೃಧ್ದಿ ಪ್ರಾಧಿಕಾರದ ಮೂಲಕ ಜಾಗ ಖರೀದಿಸಿ ಅಲ್ಲಿ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಲೇ ಔಟ್ ನಿರ್ಮಾಣದ ಗುರಿ ಹೊಂದಿದ್ದು, ಪ್ರಾಧಿಕಾರದ ಕಚೇರಿಯನ್ನು ಜನಸ್ನೇಹಿಯಾಗಿ ರೂಪಿಸಿ,  ಸಾರ್ವಜನಿಕರಿಗೆ ಶೀಘ್ರದಲ್ಲಿ ಸೇವೆ ನೀಡಲಾಗುವುದು, ಪ್ರತಿದಿನ ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಾಗಿ ನೂತನ ಅಧ್ಯಕ್ಷ ರಾಘವೇಂದ್ರ ಕಿಣಿ ತಿಳಿಸಿದರು.

ಕೊರೋನಾ ದ ಈ ಸಮಯದಲ್ಲಿ ಸಾರ್ವಜನಿಕರು ತುರ್ತು ಅನಿವಾರ್ಯವಿದ್ದಲ್ಲಿ ಮಾತ್ರ ಕಚೇರಿಗೆ ಆಗಮಿಸುವಂತೆ ತಿಳಿಸಿದ ಅಧ್ಯಕ್ಷರು, ಸಾರ್ವಜನಿಕರು ಪ್ರಾಧಿಕಾರದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ಈ ಮೇಲ್ ಗೆ ದಾಖಲಾತಿಗಳನ್ನು ಕಳುಹಿಸುವ ಮೂಲಕ ಸಹ ಅಗತ್ಯ ನೆರವು ಪಡೆಯುವಂತೆ ತಿಳಿಸಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ನಗರಾಭಿವೃದ್ದಿಯ ಮಾಸ್ಟರ್ ಪ್ಲಾನ್ ಇದುವರೆಗೆ ಅನುಮೋದನೆಗೊಂಡಿಲ್ಲ ಇದರ ಅನುಮೋದನೆಗೆ ನೂತನ ಅಧ್ಯಕ್ಷರು ಮತ್ತು ಅವರ ತಂಡ ಪ್ರಯತ್ನಿಸಬೇಕು. ಪ್ರಾಧಿಕಾರದ ಮೂಲಕ ಜಾಗ ಖರೀದಿಸಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವ್ಯವಸ್ಥಿತವಾದ ವಸತಿ ಸೌಲಭ್ಯ ಒದಗಿಸಬೇಕು. ಪ್ರಸ್ತುತ ಜೋನ್ ಬದಲಾವಣೆಗೆ ಸಮಸ್ಯೆ ಇದ್ದು ಅದನ್ನು ಸರಳಗೊಳಿಸಬೇಕು ಎಂದು ಹೇಳಿದರು.

ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್, ಪ್ರಾಧಿಕಾರದ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು, ಪ್ರಾಧಿಕಾರದ ಜವಾಬ್ದಾರಿ ಹೆಚ್ಚಿದೆ, ಲೇ ಔಟ್ ಗಳಿಗೆ ಅನುಮತಿ ನೀಡುವ ಸಮಯದಲ್ಲಿ ಸರ್ಕಾರದ ನಿಯಮಗಳಂತೆ ಪಾರ್ಕ್ ಮತ್ತು ರಸ್ತೆಗಳಿಗೆ ಅಗತ್ಯ ಜಾಗ ಮೀಸಲಿಡುವ ಬಗ್ಗೆ ಹೆಚಿನ ಗಮನಹರಿಸಬೇಕು, ಬಿಡಿಬಿಡಿಯಾಗಿ ಅನುಮತಿ ನೀಡದೇ ವ್ಯವಸ್ಥಿತ ಲೇಔಟ್ ಗಳ ನಿರ್ಮಾಣಕ್ಕೆ ಅನುಮತಿ ನೀಡುವುದರ ಮೂಲಕ ನಿರ್ಮಾಣದ ನಂತರ ಯಾವುದೇ ವಿವಾದಗಳು ತಲೆದೋರದಂತೆ ನೋಡಿಕೊಳ್ಳಬೇಕು ಎಂದರು.

ಉಡುಪಿ ನಗರದಲ್ಲಿ ಕೆರೆಗಳ ಅಭಿವೃದ್ಧಿಗಾಗಿ 5 ಕೋಟಿ ರೂ ಗಳ ಕ್ರಿಯಾಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ ಪ್ರಾಧಿಕಾರದಲ್ಲಿ ಹಣದ ಕೊರತೆ ಇಲ್ಲ,  ನಗರದಲ್ಲಿ ಕರೆ ಅಭಿವೃಧ್ದಿ ಮತ್ತು ಪಾರ್ಕ್ ಗಳ ನಿರ್ಮಾಣಗ ಜೊತೆಗೆ ವಾಕಿಂಗ್ ಪಾಥ್ ಗಳು ಮತ್ತು ಓಪನ್ ಜಿಮ್ ಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಪ್ರಭಾರ ಆಯುಕ್ತ ಹಾಗೂ ಕುಂದಾಪುರ ಉಪ ವಿಬಾಗಾಧಿಕಾರಿ ರಾಜು ಪ್ರಾಧಿಕಾರದ ನೂತನ ಸದಸ್ಯರಾದ ದಿನಕರ ಪೂಜಾರಿ, ಕಿಶೋರ್ ಕುಮಾರ್, ಪ್ರವೀಣ್ ಶೆಟ್ಟಿ, ಸುಮಾ ನಾಯಕ್  ಮತ್ತಿತರರು ಉಪಸ್ಥಿತರಿದ್ದರು.