ಮಂಗಳೂರಿನಲ್ಲಿ ರ‍್ಯಾಗಿಂಗ್: ಇಬ್ಬರು ವಿದ್ಯಾರ್ಥಿಗಳ ಮೇಲೆ ಬೆಲ್ಟ್‌ನಿಂದ ಹಲ್ಲೆ: ಐವರು ಬಂಧನ

ಮಂಗಳೂರು: ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ರ‍್ಯಾಗಿಂಗ್ ಹೆಸರಿನಲ್ಲಿ ಇಬ್ಬರು ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ದ್ವಿತೀಯ ವರ್ಷದ ಐವರು ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಸೆಪ್ಟೆಂಬರ್ 19ರಂದು ಪಾಂಡೇಶ್ವರದಲ್ಲಿರುವ ತಮ್ಮ ಕಾಲೇಜಿನ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ವಿದ್ಯಾರ್ಥಿಗಳನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದ ಆರೋಪಿಗಳು, ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದೂರಿನ ಪ್ರಕಾರ, ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಬೆಲ್ಟ್, ಲೋಹದ ಸರಳುಗಳು ಹಾಗೂ ಪೈಪ್‌ಗಳಿಂದ ಹಲ್ಲೆ ಮಾಡಲಾಗಿದೆ.

ಹಲ್ಲೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಅಥವಾ ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳು ಬಳಿಕ ಮನೆಗೆ ತೆರಳಿ, ಪೋಷಕರಿಗೆ ಘಟನೆ ವಿವರಿಸಿದ್ದಾರೆ. ಪೋಷಕರ ನೆರವಿನಿಂದ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಐವರು ಬಂಧನ

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಮಾಹಿತಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ರಹಾನ್ ಎಂ.ಪಿ., ಮೊಹಮ್ಮದ್ ಉವೈಸ್, ಮೊಹಮ್ಮದ್ ಆದಿಲ್ ಯು.ಪಿ., ರೋಹನ್ ರಮೇಶ್ ಹಾಗೂ ನಶೆದ್ ಅಮೀರ ಎಂಬ ಐವರನ್ನು ಬಂಧಿಸಲಾಗಿದೆ.

ಬಂಧಿತರೆಲ್ಲರೂ 19 ವರ್ಷದವರಾಗಿದ್ದು, ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ (ಲಾಜಿಸ್ಟಿಕ್ಸ್) ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಹಾನ್ ಮತ್ತು ರೋಹನ್ ಕಣ್ಣೂರು ಜಿಲ್ಲೆಯ ಪಯ್ಯನೂರಿನವರು, ಮೊಹಮ್ಮದ್ ಉವೈಸ್ ಕಾಸರಗೋಡು ಜಿಲ್ಲೆಯವರು, ಮೊಹಮ್ಮದ್ ಆದಿಲ್ ಕೋಝಿಕ್ಕೋಡ್ ಜಿಲ್ಲೆಯವರು ಹಾಗೂ ನಶೆದ್ ಅಮೀರ ಕಣ್ಣೂರು ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರಿಗಾಗಿ ಶೋಧ

ಪ್ರಕರಣದಲ್ಲಿ ಇನ್ನೂ ನಾಲ್ವರು ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.