ಉಡುಪಿ: ಭಾರತೀಯ ವಾಯು ಸೇನೆಗೆ ನೂತನ ಐದು ರೆಫೆಲ್ ಯುದ್ಧ ವಿಮಾನಗಳು ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ ಕಾರ್ಯಕ್ರಮವು ನಗರದ ಮಾರುಥಿ ವೀಥಿಕಾದಲ್ಲಿ ಇಂದು ನಡೆಯಿತು.
20 ×14 ಅಡಿ ಸುತ್ತಳತೆಯ ಬೃಹತ್ ಗಾತ್ರದ ರಾಷ್ಟಧ್ವಜ ಪ್ರದರ್ಶಿಸುವ ಮೂಲಕ ದೇಶದ ಸಾಧನೆಗೆ ಗೌರವ ಸಮರ್ಪಣೆ ನಡೆಸಲಾಯಿತು. ‘ಉಡುಪಿ ಸ್ವಿಟ್ಸ್ ಕಲ್ಸಂಕ’ ಮಳಿಗೆಯ, ಸಿಹಿ ಖಾದ್ಯ ತಯಾರಕರ ತಂಡವು, ಸ್ಥಳದಲ್ಲಿ ತಯಾರಿಸಿದ ಬಿಸಿ ಬಿಸಿ ಜಿಲೇಬಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ದೇಶದ ಶಕ್ತಿ ಬಲಿಷ್ಠಗೊಳಿಸಲು ಭಾರತ ಸರಕಾರವು ಅತ್ಯಾಧುನಿಕ ತಂತ್ರಜ್ಞಾನದ ರೆಫೆಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ನಡೆಸಿದ್ದು ಹೆಮ್ಮೆಯ ವಿಚಾರ. ದೇಶದ ಸೇನಾವ್ಯವಸ್ಥೆ ಮತ್ತಷ್ಟು ಬಲ ಪಡೆದುಕೊಂಡಿದೆ. ದೇಶದ ವಾಸಿಗಳು ಸಂಭ್ರಮಿಸಬೇಕಾದ ಕ್ಷಣವೆಂದು, ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ಕೆ.ಬಾಲಗಂಗಾಧರ ರಾವ್, ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಧ್ಯಾಯ, ತಾರಾನಾಥ್ ಮೇಸ್ತ ಶಿರೂರು, ಮಹಮ್ಮದ್, ಕ್ಲಾಸಿಕ್ ಟಚ್ ಸುಧಾಕರ ಶೆಟ್ಟಿ, ರಾಜೇಶ್ ಕಲ್ಮಾಡಿ ಹಾಗೂ ಕೋಟಕ್ ಮಹೇಂದ್ರ ಬ್ಯಾಂಕಿನ ಸಿಬ್ಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು.