ಭಾರತಕ್ಕೆ ಬಂದಿಳಿದ ರಫೇಲ್ ಯುದ್ದ ವಿಮಾನ: ಸೇನಾ ಬತ್ತಳಿಕೆಗೆ ಸೇರಿತು ಬಲಿಷ್ಟ ಫೈಟರ್ ಜೆಟ್

ನವದೆಹಲಿ: ಬಹು ನಿರೀಕ್ಷಿತ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳು ಬುಧವಾರ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ.

ಬೆಳಗ್ಗೆ 11.44ರ ಹೊತ್ತಿನಲ್ಲಿ ಮತ್ತೆ ಟೇಕ್ ಆಫ್ ಯುದ್ಧ ವಿಮಾನಗಳು ಭಾರತದತ್ತ ಪಯಾಣ ಬೆಳೆಸಿದ್ದು, ಅನಂತರ ಹರ್ಯಾಣ ಅಂಬಾಲಾ ಏರ್ ಬೇಸ್ ಗೆ ಬಂದಿಳಿದಿವೆ.
ಫ್ರೆಂಚ್‌ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್‌ ಕಾರ್ಖಾನೆ ನಿರ್ಮಿಸಿದ ರಫೆಲ್ ಫೈಟರ್‌ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್‌ ನಗರದ ಮೆರಿಗ್ನಾಕ್‌ ವಾಯು ನೆಲೆಯಿಂದ ಜು. 27ರಂದು ಭಾರತದತ್ತ ಮುಖ ಮಾಡಿದ್ದವು. ಅನಂತರ 7 ಗಂಟೆಯ ಪ್ರಯಾಣದ ಬಳಿಕ, ಮಂಗಳವಾರ ಯುಎಇಯ ಅಲ್‌ ದಫ್ರಾ ನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿತ್ತು. ಅಲ್ಲಿ ಯುದ್ಧ ವಿಮಾನಗಳ ಪೈಲಟ್ ಗಳು ವಿಶ್ರಾಂತಿ ಪಡೆದು, ಯುದ್ಧವಿಮಾನಕ್ಕೆ ಇಂಧನ ತುಂಬಿಸಿಕೊಂಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ರಾಜನಾಥ್ ಸಿಂಗ್ ಅವರು ರಾಫೆಲ್ ಯುದ್ಧ ವಿಮಾನ ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ. ‘ಉಕ್ಕಿನ ಹಕ್ಕಿಗಳು ಸುರಕ್ಷಿತವಾಗಿ ಬಂದಿಳಿದಿವೆ. ರಾಫೆಲ್ ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ ಎಂದಿದ್ದಾರೆ.
ಸುರಕ್ಷಿತವಾಗಿ ರಾಫೆಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತಂದ ಭಾರತೀಯ ವಾಯುಸೇನೆಯ ಪೈಲಟ್ ಗಳನ್ನೂ ಶ್ಲಾಘಿಸಿದರು. ನಿಗದಿತ ಸಮಯಕ್ಕೆ ಸರಿಯಾಗಿ ಯುದ್ಧ ವಿಮಾನಗಳನ್ನು ಸಿದ್ದಪಡಿಸಿ ತರಿಸಿದ್ದಕ್ಕಾಗಿ ಫ್ರಾನ್ಸ್ ಸರಕಾರಕ್ಕೂ ಧನ್ಯವಾದ ಸಲ್ಲಿಸಿದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ತಿಳಿಸಿ ಮೋದಿ ಅವರ ದಿಟ್ಟ ನಿರ್ಧಾರದಿಂದ ಈ ಯುದ್ದ ವಿಮಾನ ಖರೀದಿ ಸಾಧ್ಯವಾಯಿತು ಎಂದರು.