ಸೋಮವಾರ ಬೆಳಗ್ಗೆ ಮಿಯಾಮಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ನ ಎಫ್ಟಿಎಕ್ಸ್ ಕ್ರಿಪ್ಟೋ ಕಪ್ನ ಕೊನೆಯ ಸುತ್ತಿನಲ್ಲಿ ಭಾರತೀಯ ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿದ್ದಾನೆ. ಆದರೆ ಈ ಗೆಲುವಿನ ಹೊರತಾಗಿಯೂ, 17 ವರ್ಷದ ಚೆಸ್ ಆಟಗಾರ ಚಾಂಪಿಯನ್ಶಿಪ್ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾನೆ ಏಕೆಂದರೆ, ಹಿಂದಿನ ಆಟಗಳ ಆಧಾರದಲ್ಲಿ ಕಾರ್ಲ್ಸೆನ್ ಹೆಚ್ಚಿನ ಸ್ಕೋರ್ ಹೊಂದಿದ್ದರು.
ನಿಯಮಿತ ಆಟದ ಕೊನೆಯಲ್ಲಿ ಸ್ಕೋರ್ 2-2 ರಲ್ಲಿ ಸಮವಾದ ನಂತರ ಪ್ರಗ್ನಾನಂದ ಕಾರ್ಲ್ಸೆನ್ ನನ್ನು ಬ್ಲಿಟ್ಜ್ ಟೈ ಬ್ರೇಕ್ನಲ್ಲಿ ಸೋಲಿಸಿದನು. ಈ ವರ್ಷದ ಫೆಬ್ರವರಿಯಲ್ಲಿ ಆನ್ಲೈನ್ ಚೆಸ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಕಾರ್ಲ್ಸೆನ್ ಅವರನ್ನು ಸೋಲಿಸಿದ ನಂತರ ಪ್ರಗ್ನಾನಂದ ಮುನ್ನಲೆಗೆ ಬಂದಿದ್ದನು. ಕೇವಲ 16 ವರ್ಷದವನಿದ್ದಾಗ ಏರ್ಥಿಂಗ್ಸ್ ಮಾಸ್ಟರ್ಸ್ ಕ್ಷಿಪ್ರ ಚೆಸ್ ಸ್ಪರ್ಧೆಯಲ್ಲಿ, ಕಾರ್ಲ್ಸನ್ ಪ್ರಗ್ನಾನಂದಾ ವಿರುದ್ಧ ಸೋತಿದ್ದರು. ಇದಲ್ಲದೆ, ಈ ವರ್ಷದ ಮೇನಲ್ಲಿ, ಚೆಸ್ಸಬಲ್ ಮಾಸ್ಟರ್ಸ್ ಆನ್ಲೈನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿಯೂ ಪ್ರಗ್ನಾನಂದ ಕಾರ್ಲ್ಸೆನ್ ಅವರನ್ನು ಸೋಲಿಸಿದ್ದನು. ಇದೀಗ ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ನ ಕೊನೆಯ ಸುತ್ತಿನಲ್ಲೂ ವಿಶ್ವ ಚಾಂಪಿಯನ್ ಅನ್ನು ಸೋಲಿಸುವ ಮೂಲಕ ತಾನು ಯಾರಿಗೂ ಕಮ್ಮಿ ಇಲ್ಲ ಎಂದು ಈ ಪೋರ ಜಗತ್ತಿಗೆ ತೋರಿಸಿದ್ದಾನೆ.
ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ಚೆಸ್ ಇದು ವಾರ್ಷಿಕ ಸರ್ಕ್ಯೂಟ್ನ ಮೆಲ್ಟ್ವಾಟರ್ ಚಾಂಪಿಯನ್ಸ್ ಚೆಸ್ ಟೂರ್ನ 2022 ರ ಋತುವಿಗಾಗಿ ಮಿಯಾಮಿಯಲ್ಲಿ ನಡೆಯುತ್ತಿರುವ ಲೈವ್ ಚೆಸ್ ಚಾಂಪಿಯನ್ಶಿಪ್ ಈವೆಂಟ್ ಆಗಿದೆ. ಈವೆಂಟ್ ಅನ್ನು ಎಫ್ಟಿಎಕ್ಸ್ ಕ್ರಿಪ್ಟೋ ಎಕ್ಸ್ ಚೇಂಜ್ ವತಿಯಿಂದ ಆಯೋಜಿಸಲಾಗಿದೆ. ಈವೆಂಟ್ನಲ್ಲಿ ಪ್ರತಿ ಪಂದ್ಯದ ಗೆಲುವು $7,500 ಬಹುಮಾನವನ್ನು ಹೊಂದಿರುತ್ತದೆ. ಪ್ರತಿ ಪಂದ್ಯವನ್ನು ನಾಲ್ಕು ಕ್ಷಿಪ್ರ ಆಟಗಳಲ್ಲಿ, 2-2 ಡ್ರಾದ ಸಂದರ್ಭದಲ್ಲಿ ಬ್ಲಿಟ್ಜ್ ಟೈ-ಬ್ರೇಕ್ಗಳೊಂದಿಗೆ ಆಡಲಾಗುತ್ತದೆ.