ಈಜು ಸ್ಪರ್ಧೆಯಲ್ಲಿ ಭಾರತಕ್ಕೆ 5 ಚಿನ್ನದ ಪದಕಗಳನ್ನು ಗೆದ್ದ ನಟ ಆರ್.ಮಾಧವನ್ ಪುತ್ರ ವೇದಾಂತ್ ಮಾಧವನ್

ಚೆನ್ನೈ: ಸಾಮಾನ್ಯವಾಗಿ ತಂದೆ-ತಾಯಿ ಯಾವ ವೃತ್ತಿಯಲ್ಲಿರುತ್ತಾರೋ ಮಕ್ಕಳೂ ಕೂಡಾ ಅದೇ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಅದರಲ್ಲೂ ಚಿತ್ರತಾರೆಯರು, ರಾಜಕಾರಣಿಗಳು ಮತ್ತು ಕ್ರಿಕೆಟ್ ಆಟಗಾರರ ಮಕ್ಕಳಂತೂ ಕೈ ತುಂಬಾ ಹಣ ಸಂಪಾದಿಸುವ ತಂದೆಯ ಕ್ಷೇತ್ರವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಇದಕ್ಕಿಂತ ಭಿನ್ನವಾಗಿ ಬಹುಭಾಷಾ ಚಿತ್ರನಟ ಆರ್. ಮಾಧವನ್ ಮಗ ವೇದಾಂತ್ ಮಾಧವನ್ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ದೇಶಕ್ಕಾಗಿ ಚಿನ್ನ ಗೆಲ್ಲುತ್ತಿದ್ದಾನೆ.

ಮಾಧವನ್ ಪುತ್ರ ವೇದಾಂತ್ ಮಾಧವನ್ ಮಲೇಷಿಯಾದ ಆಹ್ವಾನಿತ ವಯೋಮಾನದ ಚಾಂಪಿಯನ್‌ಶಿಪ್‌ನಲ್ಲಿ ಈಜುವುದರಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದು ತಂದೆ ಆರ್ ಮಾಧವನ್ ಹೆಮ್ಮೆ ಮತ್ತು ಸಂತೋಷದಿಂದ ಬೀಗಿದ್ದಾರೆ.

Image

ತನ್ನ ಮಗನ ಚಿತ್ರವನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು “ದೇವರ ದಯೆ ಮತ್ತು ನಿಮ್ಮೆಲ್ಲರ ಶುಭ ಹಾರೈಕೆಗಳೊಂದಿಗೆ, ವಾರಾಂತ್ಯದಲ್ಲಿ ಕೌಲಾಲಂಪುರ್‌ನಲ್ಲಿ ನಡೆದ ಮಲೇಷಿಯಾದ ಆಹ್ವಾನಿತ ವಯೋಮಾನದ ಚಾಂಪಿಯನ್‌ಶಿಪ್‌ ನಲ್ಲಿ ವೇದಾಂತ್ ಭಾರತಕ್ಕೆ 5 ಚಿನ್ನವನ್ನು (50 ಮೀ, 100 ಮೀ, 200 ಮೀ, 400 ಮೀ ಮತ್ತು 1500 ಮೀ) 2 ಪಿಬಿಗಳೊಂದಿಗೆ ಪಡೆದಿದ್ದಾನೆ. ನನಗೆ ತುಂಬಾ ಸಂತೋಷವಾಗಿದೆ ಮತ್ತು ಕೃತಜ್ಞನಾಗಿದ್ದೇನೆ” ಎಂದಿದ್ದಾರೆ.

ವೇದಾಂತ್ ಪಂದ್ಯಾವಳಿಗಳಲ್ಲಿ ದೊಡ್ಡ ಗೆಲುವು ಸಾಧಿಸಿದ್ದು ಇದೇ ಮೊದಲಲ್ಲ, ಕಳೆದ ಕೆಲವು ವರ್ಷಗಳಿಂದ ಸತತ ಗೆಲುವು ದಾಖಲಿಸಿದ್ದಾರೆ ಮತ್ತು ಅನೇಕ ಪದಕಗಳನ್ನು ಭಾರತಕ್ಕಾಗಿ ಗೆದ್ದಿದ್ದಾರೆ.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ, ಖೇಲೋ ಇಂಡಿಯಾ 2023 ಪಂದ್ಯಾವಳಿಯಲ್ಲಿ ಟೀಮ್ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದ ವೇದಾಂತ್, ಪಂದ್ಯಾವಳಿಯಲ್ಲಿ ಐದು ಚಿನ್ನದ ಪದಕಗಳು ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ಜುಲೈನಲ್ಲಿ, ವೇದಾಂತ್ 48 ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ಜೂನಿಯರ್ ಈಜು ದಾಖಲೆಯನ್ನು ಮುರಿದು 1500-ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯನ್ನು ಗೆದ್ದಿದ್ದಾರೆ.

ಥಳಕು ಬಳುಕಿನ ಸಿನಿಮಾ ಲೋಕವು ಯುವಕರನ್ನು ಆಕರ್ಷಿಸುವುದು ಸಹಜ ಆದರೆ ತಂದೆ ಸಿನಿಮಾ ಲೋಕದಲ್ಲಿದ್ದರೂ ತಾನು ಮಾತ್ರ ದೇಶಕ್ಕಾಗಿ ಚಿನ್ನದ ಪದಕಗಳನ್ನು ಗೆಲ್ಲುತ್ತಿರುವುದು ವೇದಾಂತ್ ವೈಶಿಷ್ಟ್ಯವಾಗಿದ್ದು ಯುವಕರಿಗೆ ಮಾದರಿಯಾಗಿದ್ದಾರೆ.