ಎಲ್ಲಾ ಮುಗೀತು ಅಂದುಕೊಳ್ಳಲೇಬೇಡಿ, ಕನಸು ಇನ್ನೇನು ಶುರುವಾಗುತ್ತೆ !

 ಆರ್.ಜೆ.ಅಚ್ಲಾಡಿ 

ನಾವು ಜೀವನದಲ್ಲಿ ಎರಡು ವಿಚಾರಕ್ಕಾಗಿ  ಹೋರಾಟ ನಡೆಸುತ್ತಲೇ ಇರುತ್ತೇವೆ. ಒಂದು ಬದುಕಿಗಾಗಿ, ಮತ್ತೊಂದು ಬದುಕುವುದಕ್ಕಾಗಿ. ಸಣ್ಣಗೆ ಹುಷಾರ್ ತಪ್ಪಿ ಜೀವಕ್ಕೇನಾದರು ಆದರೂ ವೈದ್ಯರ ಬಳಿ ದೌಡಾಯಿಸಿ ಸಮಸ್ಯೆ ವಾಸಿಯಾಗುವ ತನಕ ಪ್ರಪಂಚವೇ ತಲೆಕೆಳಗಾದಂತೆ ಚಡಪಡಿಸುತ್ತೇವೆ, ಇದು ನಾವು ಬದುಕುವುದಕ್ಕಾಗಿ ನಡೆಸುವ ಹೋರಾಟ.

ಸಣ್ಣ ಸಂಬಳದ ನೌಕರಿಯಿಂದ ಹಿಡಿದು, ಕೋಟಿ-ಕೋಟಿ ಸಂಪಾದಿಸುತ್ತಾ ಇನ್ನಷ್ಟು-ಮತ್ತಷ್ಟು ಸಂಪಾದಿಸಬೇಕು ಎಂದು ಜೀವನಪೂರ್ತಿ ಹೋರಾಟದಲ್ಲಿರುತ್ತಾನೆ. ಇದು ಬದುಕಿಗಾಗಿ ನಡೆಸುವ ಹೋರಾಟ. ಬದುಕು ಮತ್ತು ಬದುಕುವುದು ಎನ್ನುವ ಎರಡು ವಿಚಾರಗಳು ಸಂಪೂರ್ಣವಾಗಿ ಮಾನವ ಜೀವನವನ್ನ ಮುನ್ನಡೆಸುತ್ತದೆ.

ಕೊರೊನಾ ವಿಚಾರದಲ್ಲಿ ಕೂಡ ಇದು ನಿಜವಾಗಿದೆ. ಈ ಖಾಯಿಲೆ ಅತ್ಯಂತ ಮಾರಕ, ಮನೆಯಿಂದ ಹೊರ ಹೋದ್ರೆ ಸಾಯ್ತಾರೆ, ಜೀವ ಉಳಿಸಿಕೊಳ್ಳಬೇಕಾದ್ರೆ ಮನೆಯಲ್ಲಿರಬೇಕು ಎಂದಾಗ ಬದುಕಬೇಕು ಎಂಬ ತುಡಿತದಲ್ಲಿ ನಾವೆಲ್ಲ ಮನೆಯಲ್ಲೇ ಉಳಿದೆವು. ಆದರೆ ಈಗ ಜೀವದ ಜತೆಗೆ ಜೀವನವೂ ಮುಖ್ಯ, ಬದುಕುವುದರ ಜತೆಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಸತ್ಯದ ಅರಿವಾಗಿದೆ.

ಹೀಗಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿದ್ದೇವೆ. ಆದರೆ ಮಾರಕ ಖಾಯಿಲೆಯ ಉಂಟು ಮಾಡಿದ ಯುದ್ಧದಂತಹ ಹೊಡೆತ ಜೀವನದ ನಿಲ್ದಾಣಗಳನ್ನೆಲ್ಲ ಬದಲಾಯಿಸಿಬಿಟ್ಟಿದೆ. ಶಾಂತ ಸರೋವರದಂತಿದ್ದ ಬದುಕು ಇದೀಗ ಕ್ಷುದ್ರವಾಗಿದೆ. ಬದುಕು ಕಟ್ಟಿಕೊಳ್ಳಬೇಕು ಎಂದು ಮುನ್ನಡೆದರೂ ಸಂಕಷ್ಟಗಳೆಂಬ ಹೆಬ್ಬಲೆಗಳು ನಮ್ಮನ್ನ ಅಪ್ಪಳಿಸುತ್ತಿದೆ. ಆದರೆ ಈ ನೂರಾರು ಅಡೆತಡೆಗಳು, ಸವಾಲುಗಳ ನಡುವೆ ಬದುಕೆಂಬ ದೋಣಿಯನ್ನು ದಡ ಸೇರಿಸಬೇಕಾದ ಅನಿವಾರ್‍ಯತೆಯ ಕಾಲಘಟ್ಟದಲ್ಲಿ ನಾವಿದ್ದೇವೆ.

ಸುಂದರ ನಾಳೆಗಾಗಿ ಹೋರಾಡೋಣ:
ಹೌದು ಲಾಕ್‌ಡೌನ್‌ನಿಂದಾಗಿ ಉಂಟಾದ ಅರ್ಥಿಕ, ಔದ್ಯೋಗಿಕ, ವ್ಯಾವಹಾರಿಕ ನಷ್ಟಗಳು ಮನುಷ್ಯನ್ನ ಜೀವನವನ್ನು ಕಿತ್ತು ತಿನ್ನುತ್ತಿದೆ. ಆತಂಕ, ಭಯ, ಮುಂದೇನು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತಿದೆ. ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೊಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಎರುತ್ತಿದೆ. ಕಂಪನಿಯಲ್ಲಿ ಲಕ್ಷ-ಲಕ್ಷ ಸಂಬಳ ಎಣಿಸುತ್ತಿದ್ದ ಯುವಕರು ಇದ್ದಕ್ಕಿದಂತೆ ಕೆಲಸ ಕಳೆದುಕೊಂಡಾಗ ಹಾಗೂ ಪರ್ಯಾಯ ವೃತ್ತಿ ತಿಳಿಯದಿದ್ದಾಗ ಬದುಕಿನಲ್ಲಿ ಭರವಸೆ ಕಳೆದುಕೊಂಡು ಜೀವನ ಪಯಣಕ್ಕೆ ವಿದಾಯ ಹೇಳಿದ ಅನೇಕ ಧಾರುಣ ಘಟನೆಗಳು ನಡೆಯುತ್ತಿದೆ.

ಲಕ್ಷ-ಲಕ್ಷ ಹಣ ಹೂಡಿಕೆ ಮಾಡಿ ಉದ್ಯಮ ಆರಂಭಿಸಿದ, ಉದ್ಯಮ  ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೊಳಗಾಗಿ ಮುಂದೇನು ಎನ್ನುವುದು ತಿಳಿಯದೆ ಉದ್ಯಮಿಗಳು ಬದುಕನ್ನು ಕೊನೆಯಾಗಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅರ್ಥಿಕ ಹಿಂಜರಿತದ ಪರಿಣಾಮ ಕಂಪನಿ ಸಂಬಳ ಕಟ್ ಮಾಡಿದ್ದರಿಂದ ಬ್ಯಾಂಕ್ ಇ.ಎಂ.ಐ., ಮಕ್ಕಳ ಫೀಸು ಮುಂತಾದ ಕಮಿಟ್‌ಮೆಂಟ್‌ಗಳನ್ನು ಪುಲ್‌ಪಿಲ್ ಮಾಡಲಾಗುತ್ತಿಲ್ಲ ಎಂಬ ಚಿಂತೆಯಲ್ಲಿ ಬದುಕಿಗೆ ವಿದಾಯ ಹೇಳಿದವರು ಬಹಳಷ್ಟಿದ್ದಾರೆ.

ಕೆಲಸ ಇಲ್ಲ ಮನೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೂಲೆಯಲ್ಲಿ ಚಿಂತಿಸುತ್ತಾ ಕುಳಿತವರು ಬಹಳಷ್ಟು ಮಂದಿ ಇದ್ದಾರೆ. ಇದೆಲ್ಲದರ ಪರಿಣಾಮ ಒಂದಷ್ಟು ಖಿನ್ನತೆ ಎನ್ನುವಂತದ್ದು ಸಮಸ್ಯೆಯಾಗಿ ಕೆಲವರನ್ನು ಕಾಡುತ್ತಿದೆ. ಆದರೆ ಈ ಎಲ್ಲಾ ಎಲ್ಲೆಗಳನ್ನ ಮೀರಿದ ಬದುಕೊಂದು ನಮ್ಮ ಮುಂದಿದೆ. ಆ ಸುಂದರ ನಾಳೆಗಳಿಗಾಗಿ ನಾವು ಹೋರಾಡಬೇಕಿದೆ. ದುಗುಡ, ನಿರಾಸೆ, ವೇದನೆಗಳಿಂದ ಹೊರಬರುವ ಕುರಿತು ಆಲೋಚಿಸಬೇಕು.

ಇಷ್ಟು ಮಾಡಿ ಖುಷಿಯಾಗಿರೋಣ:

ನಾವು ಯಾವಾಗಲೂ ನಮಗಿಂತ ಸುಖದಲ್ಲಿರುವವರು, ಮೇಲ್ಮಟ್ಟದಲ್ಲಿರುವವರ ಜತೆ ತುಲನೆ ಮಾಡಿಕೊಳ್ಳುತ್ತೇವೆ ಹಾಗೂ ಅವರಂತೆ ನಾವಿಲ್ಲ ಎಂದು ಮರುಗುತ್ತೇವೆ. ಆದರೆ ಈ ಕಷ್ಟದ ಸಂದರ್ಭದಲ್ಲಿ ನಮಗಿಂತ ಕಷ್ಟದಲ್ಲಿರುವವರನ್ನು, ನಮಗಿಂತ ಹೆಚ್ಚು ವ್ಯವಹಾರದಲ್ಲಿ, ಉದ್ಯೋಗದಲ್ಲಿ ನಷ್ಟ ಅನುಭವಿಸಿದವರಲ್ಲಿ ಮನಬಿಚ್ಚಿಮಾತನಾಡಬೇಕು ಹಾಗೂ ಅವರ ಕಷ್ಟದೊಂದಿಗೆ ನಮ್ಮ ಕಷ್ಟವನ್ನು ತುಲನೆ ಮಾಡಿಕೊಳ್ಳಬೇಕು. ಆಗ ಮನಸ್ಸು ಹಗುರಾಗುತ್ತದೆ.

ಜೀವನದಲ್ಲಿ ನನಗಿಂತ ಕಷ್ಟದಲ್ಲಿರುವವರಿದ್ದಾರೆ ಎನ್ನುವ ಸತ್ಯದ ಅರಿವಾಗುತ್ತದೆ. ಜತೆಗೆ ನಾವು ಅಳವಡಿಕೊಳ್ಳಬೇಕಾದ ಇನ್ನೊಂದು ಪ್ರಮುಖ ವಿಚಾರ ಪ್ರೀತಿ. ಸ್ನೇಹ-ಪ್ರೀತಿ ಮನುಷ್ಯನ್ನ ಎಲ್ಲಾ ಸಮಸ್ಯೆಗಳನ್ನು ದೂರಮಾಡಬಲ್ಲದು.

 ನಮ್ಮ ಪಾತ್ರರೊಂದಿಗೆ ಹೆಚ್ಚು ಬೆರೆಯುವುದು- ಮನಬಿಚ್ಚಿ ಮಾತನಾಡುವುದು, ಏಕಾಂಗಿತನದಿಂದ ದೂರವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕೆಲಸವಿಲ್ಲದೆ ಮನೆಯಲ್ಲಿದ್ದರೂ ಮನಸ್ಸಿಗೆ ಹತ್ತಿರವಾಗುವ ಸ್ನೇಹಿತರು, ಸಂಬಂಧಿಗಳ ಜತೆ ಹೆಚ್ಚು ಕಾಲ ಕಳೆಯುದರಿಂದ ಮನಸ್ಸು ಉಲ್ಲಾಸವಾಗುತ್ತದೆ ಮತ್ತು ಒಂಟಿತನ, ಕೆಟ್ಟ ಆಲೋಚನೆಗಳು ಬಾಧಿಸುವುದಿಲ್ಲ.

ದುಶ್ಚಟಗಳಿಂದ ದೂರವಿದ್ದು ಮನಸನ್ನು ಅರಳಿಸುವ ಸಂಗೀತ. ಕ್ರೀಡೆ, ಸಾಮಾಜಿಕ ಸೇವೆ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಮನಸ್ಸು ಕೆರಳಿಸುವ ನೆಗೆಟಿವ್ ಸುದ್ದಿಗಳು, ನೆಗೆಟಿವ್ ಸಿನಿಮಾ, ಸುದ್ದಿ ವಾಹಿನಿಗಳಿಂದ ದೂರವಿರುವುದು ಉತ್ತಮ.

♥ ಕೊರೊನಾ, ಲಾಕ್‌ಡೌನ್‌ನಿಂದಾದ ನಷ್ಟ ನನ್ನೊಬ್ಬನಿಗೆ ಬಂದ ಸಮಸ್ಯೆಯಲ್ಲ, ಇದು ಇಡೀ ಪ್ರಪಂಚಕ್ಕೆ ಬಂದ ಸಮಸ್ಯೆ. ಇಂದು ಇರುತ್ತದೆ, ನಾಳೆ ಹೋಗುತ್ತದೆ. ಎನ್ನುವುದನ್ನ ಅರಿವಿರಬೇಕು. ಮುಂದೆ ಸ್ವಲ್ಪ ದಿನ ನಷ್ಟದಲ್ಲೇ ಜೀವನ ನಡೆದರೂ ಅನಂತರ ಯಾವ ರೀತಿ ಬದುಕನ್ನು ಕಟ್ಟಿಕೊಳ್ಳಬಹುದು. ಯಾವ ರೀತಿ ವಿಭಿನ್ನವಾದ ಸಾಧನೆ ಮಾಡಬಹುದು ಎನ್ನುವುದನ್ನು ಅವಲೋಕಿಸಬೇಕು.

ಕೆಲವೊಂದು ಯುವಕರು ಯಾವುದಾದರು ಒಂದು ಕಂಪನಿಗಳಲ್ಲಿ ಹತ್ತು-ಇಪ್ಪತ್ತು ಸಾವಿರ ದುಡಿಯುತ್ತಿರುತ್ತಾರೆ. ಆದರೆ ಅವರ ನೈಜ ಕೌಶಲ್ಯವನ್ನು ಬಳಸಿ ಉದ್ಯೋಗಗಳನ್ನು ಮಾಡಿದರೆ ಲಕ್ಷಾಂತರ ಸಂಪಾದಿಸುವ ಅವಕಾಶವಿರುತ್ತದೆ. ಆದರೆ ನಿರ್ಧಿಷ್ಟವಾದ ಕೆಲಸ, ಕಂಪನಿ, ಕಂಪ್ಯೂಟರ್‌ಗಳು ಅವರ ಪ್ರತಿಭೆಯನ್ನು ಕಟ್ಟಿಹಾಕಿರುತ್ತದೆ.

ಇಂತಹ ಕೂಪ ಮಂಡೂಕದಂತಹ ಜಗತ್ತಿನಿಂದ ಹೊರಬಂದು ವಿಶಾಲವಾದ ಪ್ರಪಂಚದಲ್ಲಿ ನಮ್ಮೊಳಗಿನ ಪ್ರತಿಭೆಗೆ ಸಾಣೆಹಿಡಿಯುವ, ಉತ್ಖನನ ಮಾಡುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಲು ಇದೊಂದು ಸದಾವಕಾಶ.

♠ ಜೋರಾಗಿ ಸುರಿವ ಮಳೆ, ತನ್ನ ಗೂಡು ತೋಯ್ದು ನಾಶಪಡಿಸಿದರೂ ಅರ್ಧಮುಷ್ಠಿ ಗಾತ್ರಕ್ಕಿಂತ ಚಿಕ್ಕದಾದ ಗುಬ್ಬಿ ಮರಿ ಕಷ್ಟಪಟ್ಟು ಮತ್ತೆ-ಮತ್ತೆ ತನ್ನ ಗೂಡನ್ನು ಕಟ್ಟಿಕೊಂಡು ಹೊಸ ಬದುಕಿನೆಡೆಗೆ ಸಾಗುತ್ತದೆ.

ಆಸ್ತಿ, ಅಧಿಕಾರ, ತೋಳ್ಬಲಗಳಿಲ್ಲದ ಹಕ್ಕಿ,ಪಕ್ಷಿ, ಕಾಡು ಪ್ರಾಣಿಗಳು ಪ್ರವಾಹ, ಬಿರುಗಾಳಿ, ಸುನಾಮಿಯಂತಹ ಭೀಕರ ವಿಕೋಪಗಳಾಗಿ ಜೀವನವೇ ನಾಶವಾದರೂ ಪುನಃ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತದೆ. ಹೀಗಿರುವಾಗ ಎಲ್ಲಾ ಬಲಗಳಿರುವ ಮಾನವನಿಗೆ ಮತ್ತೆ ಜೀವನವನ್ನು ಕಟ್ಟಿಕೊಳ್ಳುವುದು ಕಷ್ಟವಲ್ಲ.

ಬದುಕೆಂಬುದೇ ಒಂದು ಹೋರಾಟ. ಇಲ್ಲಿ ಲಾಭವಿರಲಿ, ನಷ್ಟವಿರಲಿ ಹೋರಾಟ ಸದಾ ಚಾಲ್ತಿಯಲ್ಲಿರಬೇಕು. ಬದುಕುವುದರ ಜತೆಯಲ್ಲಿ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸಬೇಕು.