ನೇಜಾರು ಹತ್ಯೆ ಪ್ರಕರಣದ ಆರೋಪಿಯನ್ನು ಕ್ಷಿಪ್ರವಾಗಿ ಬಂಧಿಸಿದ ಪೊಲೀಸರ ಕಾರ್ಯ ಶ್ಲಾಘನೀಯ: ವೆರೋನಿಕಾ ಕರ್ನೆಲಿಯೋ

ಉಡುಪಿ: ಜಿಲ್ಲೆಯ ಇತಿಹಾಸದಲ್ಲೇ ನೇಜಾರು ತೃಪ್ತಿ ಲೇಔಟ್ ನಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಮಂದಿಯ ಅಮಾನುಷ ಹತ್ಯೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದ್ದು, ಪ್ರಕರಣವನ್ನು ಪೊಲೀಸ್ ಇಲಾಖೆ ಸವಾಲಾಗಿ ಸ್ವೀಕರಿಸಿ ಸಿಸಿ ಟಿವಿ ಹಾಗೂ ಇನ್ನಿತರ ಮೂಲಗಳ ಜಾಡು ಹಿಡಿದು ಕೊಲೆ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದ ಪ್ರಕರಣದಿಂದಾಗಿ ಜನತೆ ಭಯದಲ್ಲಿ ಬದುಕುವ ವಾತಾವರಣವನ್ನು ಸೃಷ್ಟಿಯಾಗಿತ್ತು. ಜಿಲ್ಲೆಯ ದಕ್ಷ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಡಾ. ಅರುಣ್ ಕೆ ಹಾಗೂ ಅವರ ತಂಡವು ಘಟನೆ ನಡೆದ ಮೂರು ದಿನಗಳ ಒಳಗಡೆ ಆರೋಪಿಯ ಜಾಡನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಸಿಬಂದಿಗಳ ಪಾತ್ರ ಶ್ಲಾಘನಾರ್ಹ.
ಪೊಲೀಸರ ಪರಿಣಾಮಕಾರಿ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಭೀಭತ್ಸ ಘಟನೆಗಳು ಶಾಂತಿ ಪ್ರಿಯರ ಜಿಲ್ಲೆ ಉಡುಪಿಯಲ್ಲಿ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ರೂಪಿಸುವುದು ಸೂಕ್ತ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಮುಂದಿನ ವಿಚಾರಣೆ ಪಾರದರ್ಶಕವಾಗಿ ನಡೆಯಲಿ ಈ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ದೊರೆಯುವಂತಾಗಲಿ. ನೇಜಾರು ಭಾಗದ ಜನರು ಘಟನೆಯಿಂದ ಆತಂಕ ಮತ್ತು ನೋವಿನಿಂದ ಇದ್ದು ಅವರ ಭಾವನೆಗಳು ಆರ್ಥವಾಗುತ್ತವೆ ಆದರೂ ಯಾವುದೇ ರೀತಿಯ ಅನುಚಿತ ವರ್ತನೆ ತೋರದೆ ಶಾಂತಿ ಕಾಪಾಡುವಂತೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.