ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ: ಎನ್ ರವಿಕುಮಾರ್

ಉಡುಪಿ: ನರ್ಸಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವುದು ಅವಶ್ಯ ಎಂದು ವಿಶೇಷ ಜಂಟಿ ಸದನ ಸಮಿತಿ, ಉಪ ಸಮಿತಿಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳು ಹಾಗೂ ಉಪನ್ಯಾಸಕರ ಕೊರತೆ ಇದೆ ಎಂಬ ದೂರುಗಳು ಕೇಳಿ ಬರುತ್ತಿವೆ.  ಕಾಲೇಜುಗಳು ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ರವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕುರಿತು ಪರಿಶೀಲಿಸಲು ವಿಶೇಷ ಜಂಟಿ ಸದನ ಸಮಿತಿಯನ್ನು ರಚಿಸಲಾಗಿದೆ ಎಂದರು.

ನರ್ಸಿಂಗ್ ಕೌನ್ಸಿಲ್ ವಿಧಿಸಿರುವ ನಿಯಮಗಳ ಅನುಸಾರ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳನ್ನು ನಡೆಸಬೇಕು. ಆದರೆ, ರಾಜ್ಯದಲ್ಲಿ ಬಹಳಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೋಧಕರ ಕೊರತೆ, ಪ್ರಯೋಗಾಲಯಗಳು ವ್ಯವಸ್ಥಿತವಾಗಿಲ್ಲದೇ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅನಾನುಕೂಲವಾಗಿರುವುದು ಕಂಡು ಬರುತ್ತಿದೆ. ಕಾಲೇಜುಗಳ ವಾಸ್ತವೀಕತೆಯನ್ನು ಪರಿಶೀಲಿಸಿ, ವರದಿಯನ್ನು ಸದನಕ್ಕೆ ನೀಡಲಾಗುವುದು ಎಂದರು.

ನರ್ಸಿಂಗ್ ಕಾಲೇಜುಗಳಿಗೆ ಹೆಚ್ಚಾಗಿ ಹೊರರಾಜ್ಯದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ನೇರವಾಗಿ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದರಿಂದ ಅವರುಗಳ ವೃತ್ತಿ ಜೀವನದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆಗಳನ್ನು ನೀಡಲು ಕಷ್ಟಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ರೋಗಿಗಳಿಗೆ ಬಾರಿ ತೊಂದರೆ ಎದುರಿಸಬೇಕಾಗುತ್ತದೆ. ಇಂತಹವುಗಳಿಗೆ ಕಡಿವಾಣ ಹಾಕುವುದು ಸೂಕ್ತ ಎಂದರು.

ಸಮಿತಿಯ ಸದಸ್ಯ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ, ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಹೊಸದಾಗಿ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸುವಾಗ, ಕಾಲೇಜುಗಳಲ್ಲಿ ಇಂತಿಷ್ಟು ಉಪನ್ಯಾಸಕರು, ಉತ್ತಮ ಪ್ರಯೋಗ ಶಾಲೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕೆಂದು ಸ್ಪಷ್ಟ ನಿಯಮಗಳನ್ನು ವಿಧಿಸಿರುತ್ತದೆ. ಈ ನಿಲುವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಬೇಕೆಂಬುದು ಆಗಿದೆ. ಆದರೆ ಕೆಲವು ಕಾಲೇಜುಗಳು ಇವುಗಳ ಪರಿಪಾಲನೆ ಮಾಡಿರುವುದಿಲ್ಲ ಎಂದರು.

ನರ್ಸಿಂಗ್ ವಿದ್ಯಾರ್ಥಿಗಳು ಐಚ್ಛಿಕ ವಿಷಯ, ಪ್ರಯೋಗ ಶಾಲೆಗಳ ಶಿಕ್ಷಣ ಪಡೆಯುವುದರ  ಜೊತೆಗೆ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯಲು ಹೋದಾಗ ಸ್ಥಳೀಯ ಜನರೇ ಹೆಚ್ಚು ರೋಗಿಗಳಾಗಿರುವುದರಿಂದ ಹೊರ ರಾಜ್ಯದಿಂದ ವಿದ್ಯಾಭ್ಯಾಸಕ್ಕೆ ಬಂದ ವಿದ್ಯಾರ್ಥಿಗಳು ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದು ಕಷ್ಟಸಾಧ್ಯ. ಅವರುಗಳಿಗೆ ಕನ್ನಡ ಕಲಿಸುವ ವ್ಯವಸ್ಥೆಯಾಗಬೇಕು ಎಂದರು.

ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿರುವಾಗ ನರ್ಸಿಂಗ್ ಕಾಲೇಜುಗಳಲ್ಲಿ ಯಾವುದೇ ರೀತಿಯಲ್ಲಿ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸುವುದು ಶಿಕ್ಷಣ ಸಂಸ್ಥೆಯ ಕರ್ತವ್ಯ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಕಳೆದ ಕೋವಿಡ್ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕೋವಿಡ್ ನಿಯಂತ್ರಣ ಸೇರಿದಂತೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ ಅವರು, ನರ್ಸಿಂಗ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಮಿತಿಯು ನೀಡುವ  ಸಲಹೆಗಳನ್ನು ತಪ್ಪದೇ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯರುಗಳು ಹಾಗೂ ವಿಶೇಷ ಜಂಟಿ ಸದನ ಸಮಿತಿ, ಉಪ ಸಮಿತಿಯ ಸದಸ್ಯರುಗಳಾದ ಮುನಿರಾಜು ಗೌಡ, ಡಾ. ಅವಿನಾಶ್ ಉಮೇಶ್ ಜಾಧವ್, ಅಪರ ಕಾರ್ಯದರ್ಶಿ ಎಸ್ ನಿರ್ಮಲಾ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ಹಾಗೂ ವಿವಿಧ ನರ್ಸಿಂಗ್ ಕಾಲೇಜು ಪ್ರಾಂಶುಪಾಲರುಗಳು, ನೂಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.