ಟೊರೊಂಟೊ(ಕೆನಡಾ): ಕ್ಯಾಲ್ಗರಿಯಲ್ಲಿ ಇಂದಿನಿಂದ ಪ್ರಾರಂಭವಾಗುವ ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಷಟ್ಲರ್ಗಳಾದ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಭಾರತವನ್ನು ಮುನ್ನಡೆಸಲಿದ್ದಾರೆ.ಗಾಯದಿಂದ ಮರಳಿದ ನಂತರ ಪಿವಿ ಸಿಂಧು ಅವರ ರಾಕೆಟ್ ಮೌನವಾಗಿದೆ ಎನ್ನಬಹುದು. ಈ ವರ್ಷ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಕೆನಡಾ ಓಪನ್ನಿಂದ ಕಮ್ಬ್ಯಾಕ್ ನಿರೀಕ್ಷೆ ಇದೆ.
ತೈಪೆ ಓಪನ್ 2023 ಅನ್ನು ಕಳೆದುಕೊಂಡ ನಂತರ ಪಿವಿ ಸಿಂಧು ಮತ್ತೆ ತಮ್ಮ ಹೊಸ ಪ್ರಯಾಣವನ್ನು ಕೆನಡಾ ಓಪನ್ನಿಂದ ಆರಂಭಿಸಲು ಇಚ್ಚಿಸಿದ್ದಾರೆ.
12ನೇ ಶ್ರೇಯಾಂಕದ ಸಿಂಧು ಕಳೆದ ಮೂರು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಎರಡನೇ ಸುತ್ತಿನಿಂದಲೇ ಬಹುತೇಕ ಸ್ಪರ್ಧೆಗಳಲ್ಲಿ ಹೊರಗುಳಿದಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಸಿಂಗಾಪುರ ಓಪನ್ ಮತ್ತು ಥಾಯ್ಲೆಂಡ್ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ ನಂತರ ಇಂಡೋನೇಷ್ಯಾ ಓಪನ್ನ 16 ರ ಸುತ್ತಿನಲ್ಲಿ ಹೊರಬಿದ್ದಿದ್ದರು.
ಈ ವರ್ಷದಲ್ಲಿ ಸಿಂಧು ಮ್ಯಾಡ್ರಿಡ್ ಮಾಸ್ಟರ್ಸ್ 2023 ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದರು. ಮಲೇಷ್ಯಾ ಮಾಸ್ಟರ್ಸ್ನ ಸೆಮಿ-ಫೈನಲ್ ತಲುಪಿರುವುದು ಗಮನಾರ್ಹವಾದ ಸಂಗತಿಯಾಗಿದೆ. 27 ವರ್ಷ ವಯಸ್ಸಿನ ಸಿಂಧು ಕೆನಡಾ ಓಪನ್ 2023ರನ್ನು ಕೆನಡಾದ ವಿಶ್ವದ 61 ನೇ ಶ್ರೇಯಾಂಕದ ತಾಲಿಯಾ ಎನ್ಜಿ ವಿರುದ್ಧ ತಮ್ಮ ಮಹಿಳಾ ಸಿಂಗಲ್ಸ್ನ್ನು ಆಡಲಿದ್ದಾರೆ.
ಸಿಂಧು ಹೊರತುಪಡಿಸಿ, ತಸ್ನಿಮ್ ಮಿರ್ ಮತ್ತು ರುತ್ವಿಕಾ ಶಿವಾನಿ ಮಹಿಳೆಯರ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ ಭಾಗವಹಿಸುವ ಭಾರತದ ಇತರರಾಗಿದ್ದಾರೆ. ತಸ್ನಿಮ್ ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ವಿರುದ್ಧ ಮೊದಲ ಪಂದ್ಯವನ್ನು ಆಡಿದರೆ, ರುತ್ವಿಕಾ ಶಿವಾನಿ ತನ್ನ ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್ನ ಸುಪಾನಿಡಾ ಕಟೆಥಾಂಗ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಶ್ವದ ನಂ.19ನೇ ಆಟಗಾರ ಲಕ್ಷ್ಯ ಸೇನ್ ಭಾರತದ ಏಕೈಕ ಬ್ಯಾಡ್ಮಿಂಟನ್ ಆಟಗಾರನಾಗಲಿದ್ದಾರೆ. ಲಕ್ಷ್ಯ ಸೇನ್ 32ರ ಸುತ್ತಿನಲ್ಲಿ ಥಾಯ್ಲೆಂಡ್ನ ವಿಶ್ವದ ನಂ. 3 ಕುನ್ಲಾವುಟ್ ವಿಟಿಡ್ಸರ್ನ್ ವಿರುದ್ಧ ಆಡಲಿದ್ದಾರೆ. 2014ರ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ಅರ್ಹತಾ ಸುತ್ತಿನಲ್ಲಿ ಜರ್ಮನ್ ಕೈ ಸ್ಕೇಫರ್ ಅವರನ್ನು ಎದುರಿಸಲಿದ್ದಾರೆ. ಅರ್ಹತೆಯಲ್ಲಿ, ಎಸ್ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಮತ್ತು ಬಿ ಸಾಯಿ ಪ್ರಣೀತ್ ಕೂಡ ಇದ್ದಾರೆ.
ಬಿ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಮಿಶ್ರ ಡಬಲ್ಸ್ನ ಮೊದಲ ಸುತ್ತಿನಲ್ಲಿ ಜಪಾನಿನ ಜೋಡಿಯಾದ ಯುಕಿ ಕನೆಕೊ ಮತ್ತು ಮಿಸಾಕಿ ಮತ್ಸುಟೊಮೊ ವಿರುದ್ಧ ಆಡಲಿದ್ದಾರೆ. ಸಾಯಿ ಪ್ರತೀಕ್ ಕೆ ಮತ್ತು ತನಿಶಾ ಕ್ರಾಸ್ಟೊ ಅರ್ಹತಾ ಸುತ್ತಿನಲ್ಲಿ ಆಡಲಿದ್ದಾರೆ. ಕೆನಡಾ ಓಪನ್ 2023 ಇಂಡೋನೇಷ್ಯಾ ಮಾಸ್ಟರ್ಸ್, ಮಲೇಷ್ಯಾ ಮಾಸ್ಟರ್ಸ್ ಮತ್ತು ಥಾಯ್ಲೆಂಡ್ ಓಪನ್ ನಂತರ 2023 ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಕ್ಯಾಲೆಂಡರ್ನ ನಾಲ್ಕನೇ ಸೂಪರ್ 500 ಪಂದ್ಯಾವಳಿಯಾಗಿದೆ.
ಹೆಚ್ ಎಸ್ ಪ್ರಣಯ್ ಮತ್ತು ಕಿಡಂಬಿ ಶ್ರೀಕಾಂತ್ ಅವರು ಕೆನಡಾ ಈವೆಂಟ್ನಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ಇಂಡೋನೇಷ್ಯಾ ಓಪನ್ ಗೆದ್ದಿದ್ದ ಭಾರತದ ಅಗ್ರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಕೂಡ ಪಂದ್ಯಾವಳಿಯನ್ನು ಮಿಸ್ ಮಾಡಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಳ ಜೋಡಿ ಭಾರತವನ್ನು ಪ್ರತಿನಿಧಿಸಲಿದೆ. ಇವರಿಬ್ಬರು ಆರಂಭಿಕ ಪಂದ್ಯದಲ್ಲಿ ಫ್ರೆಂಚ್ ಜೋಡಿ ಜೂಲಿಯನ್ ಮೈಯೊ ಮತ್ತು ವಿಲಿಯಂ ವಿಲ್ಲೆಗರ್ ವಿರುದ್ಧ ಆಡಲಿದ್ದಾರೆ. ಮಹಿಳೆಯರ ಡಬಲ್ಸ್ನಲ್ಲಿ ಭಾರತದ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಇಯಾ ಮತ್ತು ಗ್ರೋನ್ಯಾ ಸೊಮರ್ವಿಲ್ಲೆ ವಿರುದ್ಧ ಸೆಣಸಲಿದ್ದಾರೆ. ರುತಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ ಜೋಡಿ ಕೂಡ ಆಡಲಿದ್ದಾರೆ.