ಪುತ್ತೂರು: ಸಾಮೂಹಿಕ ಅತ್ಯಾಚಾರ ಪ್ರಕರಣ; ಆರೋಪಿ ವಿದ್ಯಾರ್ಥಿಗಳ ಪರ ವಕಾಲತ್ತು ಮಾಡಬಾರದು: ಶ್ರೀರಾಮ ಸೇನೆ

ಉಡುಪಿ: ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿದ್ಯಾರ್ಥಿಗಳ ಪರವಾಗಿ ಯಾವ ವಕೀಲರು ವಕಾಲತ್ತು ಮಾಡಬಾರದು. ಇದೊಂದು ಹೇಯ, ಸಮಾಜ ತಲೆತಗ್ಗಿಸುವ ಕೃತ್ಯ ಎಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ‌ ಆಗ್ರಹಿಸಿದ್ದಾರೆ.
ಆರೋಪಿಗಳ ಪರವಾಗಿ ಯಾರು ವಕಾಲತ್ತು ಮಾಡದೆ, ಸಂಸ್ರತ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು.

ಶಿವು ಸಾವು: ಸತ್ಯ ಮರೆಮಾಚಲು ಯತ್ನ
ಬೆಳಗಾವಿ ಜಿಲ್ಲೆಯ ಹಿರೇ ಬಾಗೇವಾಡಿಯಲ್ಲಿ ಕೆಲ ದಿನಗಳ ಹಿಂದೆ ನಡೆದ ಗೋ ಪ್ರೇಮಿ ಶಿವು
ಉಪ್ಪಾರ ಅವರ ಸಾವಿನ ಪ್ರಕರಣದಲ್ಲಿ ಹಲವು ಅನುಮಾನವಿದೆ. ಈ ಪ್ರಕರಣವನ್ನು
ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಶಿವುಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ
ಪರಿಸ್ಥಿತಿ ಇರಲಿಲ್ಲ. ಜೀವ ಬೆದರಿಕೆಗಳು ಬಂದಿರುವುದು ತಿಳಿದುಬಂದಿದೆ. ಆದರೂ ಪೊಲೀಸರು ಕೊಲೆ ಪ್ರಕರಣ ದಾಖಲಿಸದೆ, ಆತ್ಮಹತ್ಯೆಯೆಂದು ದಾಖಲಿಸಿ ಸತ್ಯವನ್ನು ಮರೆಮಾಚುವ ಯತ್ನ ಮಾಡುತ್ತಿದ್ದಾರೆ ಎಂದರು.
ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಆಗುತ್ತಿರುವ ಗೋಮಾಂಸದ ರಫ್ತಿಗೆ ನಿಷೇಧ ಹೇರಬೇಕು. ಅನಧಿಕೃತ ಕಸಾಯಿಖಾನೆಗಳನ್ನು ಕೂಡಲೇ ಮುಚ್ಚಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ:
ಶಿವು ಉಪ್ಪಾರ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು
ಒತ್ತಾಯಿಸಿ ಶ್ರೀರಾಮ ಸೇನೆ ಸಂಘಟನೆಯ ನೇತೃತ್ವದಲ್ಲಿ ಕರಾವಳಿಯ ವಿವಿಧ ಮಠಾಧೀಶರು, ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಜುಲೈ 8ರಂದು ಬೆಳಿಗ್ಗೆ 11ಗಂಟೆಗೆ ‘ಬೆಳಗಾವಿ ಚಲೋ’
ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಜಿಲ್ಲೆಯಿಂದ ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಗೋಪ್ರೇಮಿಗಳು ಸೇರಿ ಒಟ್ಟು 150 ಜನ ಪಾಲ್ಗೊಳ್ಳುವರು ಎಂದರು.
ಶ್ರೀರಾಮಸೇನೆಯ ಗೌರವಾಧ್ಯಕ್ಷ ಡಿ. ರಾಧಾಕೃಷ್ಣ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಮಿತಿಮೀರಿದೆ. ಆದರೆ ಪೊಲೀಸರು ಹಾಗೂ ಜಿಲ್ಲಾಡಳಿತ ಇದರ ವಿರುದ್ಧ ಕಾರ್ಯಾಚರಣೆ ನಡೆಸದೇ ಕೈಕಟ್ಟಿ ಕುಳಿತಿದೆ. ಮುಂದಿನ ದಿನಗಳಲ್ಲಿ ಅಕ್ರಮ ಗೋವುಗಳ ಸಾಗಾಟದ ವಿರುದ್ಧ ಕಠಿಣ ಕ್ರಮಕೈಗೊಂಡು, ಇದರಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ತಪ್ಪಿದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗಿವುದು ಎಂದರು.
ಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶರತ್‌ ಪೂಜಾರಿ ಮಣಿಪಾಲ, ಯಶವಂತ್‌
ಕಲ್ಯಾಣಪುರ, ಸುನಿಲ್‌ ಶೆಟ್ಟಿ ಬೈಲೂರು, ದಿನೇಶ್‌ ಪಾಂಗಾಳ ಇದ್ದರು.