ಪುತ್ತೂರು: “ಈ ನಾಟಕ ತೂಲೆ” ತುಳು ನಾಟಕದ ಪ್ರಥಮ ಪ್ರದರ್ಶನ ಕಾರ್ಯಕ್ರಮ

ಕಲ್ಪನಾ ಲೋಕ‌ ಪುತ್ತೂರು ಉಡುಪಿ ಇವರು ಅರ್ಪಿಸುವ ನೂತನ ಶೈಲಿಯ ಕಥಾ ನಿರೂಪಣೆಯ “ಈ ನಾಟಕ ತೂಲೆ” ತುಳು ಸಾಮಾಜಿಕ ನಾಟಕದ ಪ್ರಥಮ ಪ್ರದರ್ಶನ ಕಾರ್ಯಕ್ರಮ ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಧು ವೈ.ಜಿ. ಹಳ್ಳಿ ನಿರ್ದೇಶನದ ಕುದ್ರು ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ಅಲ್ಲದೆ, ಚಿತ್ರದ ಒಂದು ಹಾಡನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಉಡುಪಿ ಕೃಷ್ಣ ಆಚಾರ್ಯ ಅವರು ಬರೆದಿರುವ ಕೋಮುಸೌಹಾರ್ದತೆಯ ಸಂದೇಶ ಸಾರುವ ಶಾಂತಿ ವೃಕ್ಷ ನಾಟಕದ ಪ್ರಕಟಿತ ಕೃತಿಯನ್ನು‌ ಅನಾವರಣಗೊಳಿಸಲಾಯಿತು.

ಕಾಪು ರಂಗ ತರಂಗ ತಂಡದ ಮುಖ್ಯಸ್ಥ, ಸಮಾಜ ಸೇವಕ ಲೀಲಾಧರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುದ್ರು ಕನ್ನಡ ಚಲನಚಿತ್ರದ ನಿರ್ಮಾಪಕ ಭಾಸ್ಕರ್ ನಾಯಕ್, ಖ್ಯಾತ ಚಲನಚಿತ್ರ ನಟಿ, ಆಕಾಶವಾಣಿ ಕಲಾವಿದೆ ಭಾರತಿ ಟಿ. ಕೆ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಡಿ. ಶೆಟ್ಟಿ, ಮೀನಾಕ್ಷಿ ಮಾಧವ್ ಬನ್ನಂಜೆ, ಚಲನಚಿತ್ರ ನಟಿರಾದ ಪ್ರಿಯಾ ಹೆಗ್ಡೆ ಪೆರ್ಡೂರು, ಸ್ವಾತಿ ಶೆಟ್ಟಿ, ವಲಯ ಬಂಟರ ಸಂಘದ ಅಧ್ಯಕ್ಷ ಶಂಕರ್ ಶೆಟ್ಟಿ ಪುತ್ತೂರು, ಕಲ್ಪನಾ ಲೋಕ ನಾಟಕ ತಂಡದ ಅಧ್ಯಕ್ಷ ಉಡುಪಿ ಕೃಷ್ಣ ಆಚಾರ್ಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಾಟಕ ಕಲಾವಿದ ಪೆರ್ಡೂರ್ ಪ್ರಭಾಕರ್ ಕಲ್ಯಾಣಿ ಅವರನ್ನು ಸನ್ಮಾನಿಸಲಾಯಿತು.

ನಿತ್ಯಾನಂದ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು.