ಉಡುಪಿ: ಉಡುಪಿಯ ಪುತ್ತೂರಿನ ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಶೈಕ್ಷಣಿಕ ಸೇವೆಯಲ್ಲಿ ನೂರು ವರ್ಷಗಳನ್ನು ಪೂರೈಸಿದ್ದು, ಈ ಐತಿಹಾಸಿಕ ಸಂಭ್ರಮವನ್ನು ನ. 20 ಮತ್ತು 21ರಂದು ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಜ್ಜಾಗಿದೆ.
‘ಜ್ಞಾನದ ಪಯಣಕ್ಕೆ’ ನೂರರ ಸಂಭ್ರಮ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ, ಬಹುಮಾನ ವಿತರಣೆ, ಸಭಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ನಾಟಕ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಫ್ಲೋರಿನ್ ಮಸ್ಕರೇನಸ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 20ರಂದು ಬೆಳಿಗ್ಗೆ 9.30ಕ್ಕೆ ಶಾಲೆಯಲ್ಲಿ ಶತಮಾನೋತ್ಸವದ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಲಕ್ಷ್ಮಣ್ ರಾಯ್ ಪ್ರಭು ದೀಪ ಬೆಳಗಿಸಲಿದ್ದು, ನಿವೃತ್ತ ಶಿಕ್ಷಕರು ಹಾಗೂ ಕ್ರಿಶ್ಚಿಯನ್ ಹೈಸ್ಕೂಲ್ನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯಲಿದೆ. ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ಮೆಂಡೋನ್ಸಾ ಬಹುಮಾನ ವಿತರಿಸಲಿದ್ದಾರೆ ಎಂದರು.
ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ಮೊನ್ಸಿಂಜೊರ್ ಫ್ರಾನ್ಸಿಸ್ ಕ್ಷೇವಿಯರ್ ಲುವಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. CESU ಉಡುಪಿಯ ಕಾರ್ಯದರ್ಶಿ ಫಾ. ವಿನ್ಸೆಂಟ್ ಕ್ರಾಸ್ತಾ, ಶಿಕ್ಷಣ ಸಂಯೋಜಕ ನಾಗಾರ್ಜುನ ಎಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ನ. 20ರಂದು ಸಂಜೆ ಉಮೇಶ್ ಮಿಜಾರ್ ಸಾರಥ್ಯದ ಮೂಡುಬಿದಿರೆಯ ‘ನಮ್ಮ ಕಲಾವಿದೆರ್ ಬೆದ್ರ’ ತಂಡದಿಂದ ‘ವೈರಲ್ ವೈಶಾಲಿ’ ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ನ. 21ರಂದು ಸಂಜೆ 5.30ಕ್ಕೆ ಶತಮಾನೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ಮೊನ್ಸಿಂಜೊರ್ ಫ್ರಾನ್ಸಿಸ್ ಕ್ಷೇವಿಯರ್ ಲುವಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮಾರೋಪದ ಅಂಗವಾಗಿ ಹಳೆ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಅಶೋಕ್ ಕೋಟ್ಯಾನ್ ಅವರ ನಿರ್ದೇಶನ ಹಾಗೂ ಹರಿಪ್ರಸಾದ್ ನಂದಳಿಕೆ ಅವರ ಕಥೆ ಹಾಗೂ ಸಂಭಾಷಣೆಯಲ್ಲಿ ಮೂಡಿಬರಲಿರುವ ‘ಕೋಡಿಯತ್ತುಜಿ..’ನಾಟಕ ವಿಶೇಷ ಆಕರ್ಷಣೆಯಾಗಲಿದೆ.
ಅಂದು ಅಪರಾಹ್ನ 12.30ಕ್ಕೆ ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರ ಪ್ರಾಯೋಜಕತ್ವದಲ್ಲಿ ಶಾಲಾ ಹಬ್ಬದೂಟದ ವ್ಯವಸ್ಥೆಯನ್ನೂ ಮಾಡಲಾಗಿದೆ.ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶೇಖರ್ ನಾಯಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶೇಟ್, ಶ್ರೀನಿವಾಸ್ ಹಾಗೂ ದಿನೇಶ್ ಗಾಂಸ್ಕರ್ ಉಪಸ್ಥಿತರಿದ್ದರು.















