ಹಿಂದೂ ಮಗು ನಾಮಕರಣವಾಗದೆ ಒದ್ದಾಡುತ್ತಿದೆ; ಕೆ.ಪಿ.ನಂಜುಂಡಿ ಆಕ್ರೋಶ!

ಮಂಗಳೂರು: ಹಿಂದುತ್ವ ಹಿಂದುತ್ವ ಎನ್ನುವ ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಮಗುವೊಂದು ಆರು ತಿಂಗಳಾದರೂ ನಾಮಕರಣ ಮಾಡಲಾಗದೆ ಒದ್ದಾಡುತ್ತಿದೆ ಎಂದರೆ ಹಿಂದುತ್ವವೆನ್ನುವುದು ನಾಚಿಕೆ ಪಡಬೇಕು ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಆಕ್ರೋಶ ವ್ಯಕ್ತಪಡಿಸಿದರು.

ತನ್ನ ಸಹಪಾಠಿಗೆ ಮಗು ಕರುಣಿಸಿ ಮದುವೆಯಾಗದೆ ಸತಾಯಿಸುತ್ತಿರುವ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ಪ್ರಕರಣದ ಬಗ್ಗೆ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿ, ಯಾರೇ ಆಗಲಿ ಜಾತಿ ಧರ್ಮ ಮೀರಿ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕು.

ಇದರಲ್ಲಿ ಬಡವರಿಗೆ ನ್ಯಾಯ ಸಿಗಬಾರದೆನ್ನುವುದೇ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರವಿದು. ಕಾಲ ಹೀಗೆ ಇರುವುದಿಲ್ಲ ನ್ಯಾಯ ಸಿಕ್ಕೇ ಸಿಗುತ್ತದೆ. ಆದರೆ ಹೊಟ್ಟೆ ಉರಿಯುತ್ತದೆ. ನಾನು ಜಾತಿ ಎಂದು ಹೇಳಿದ್ದಲ್ಲ, ಬಡವರಿಗೆ ಹೀಗೆ ಆದರೆ ಯಾರು ಬೇಕಾದರೂ ಮಕ್ಕಳು ಮಾಡಿ ಹೋಗಬಹುದು ಎಂದಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಡಿಎನ್ಎ ರಿಪೋರ್ಟ್‌ನಲ್ಲಿ ಕೃಷ್ಣ ಜೆ. ರಾವ್ ಜೈವಿಕ ತಂದೆ ಎಂದು ಬಂದ ಬಳಿಕವಾದರೂ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲು ಸೇರಿದಂತೆ ಹಿಂದೂ ಮುಖಂಡರು ಈ ಬಗ್ಗೆ ನ್ಯಾಯ ಕೊಡಿಸಬಹುದು ಎಂದು ಕೊಂಡಿದ್ದೆ. ಆದರೆ ಈವರೆಗೆ ಅದೇನೂ ಆಗಲೇ ಇಲ್ಲ. ಡಿಎನ್ಎ ರಿಪೋರ್ಟ್ ಬಂದ ಬಳಿಕವೂ ಆ ಮಗು ಕೃಷ್ಣ ಜೆ. ರಾವ್‌ನದ್ದು ಅಲ್ಲವೆಂದೇ ಅವರು ವಾದಿಸುತ್ತಿದ್ದಾರೆ ಎಂದರು.

ನಾನು ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ. ಆದರೆ ಈ ರೀತಿ ನಟನೆ ಮಾಡು ಅಂದರೆ ನನಗೆ ಆಗಲಿಕ್ಕಿಲ್ಲ. ಇಷ್ಟೊಂದು ಕಠೋರವಾಗಿ ಇರಲು ನನಗೆ ಸಾಧ್ಯವಿಲ್ಲ. ಸಮಾಜಕ್ಕೆ ರಾಜಕೀಯ ಬಲವಿಲ್ಲವೆಂಬ ಕಾರಣ, ಆರ್ಥಿಕ ಬಲವಿಲ್ಲವೆಂಬ ಕಾರಣಕ್ಕೆ ಇಂತಹ ಪ್ರಕರಣಗಳು ಮುಚ್ಚಿ ಹೋದಲ್ಲಿ ಸಂವಿಧಾನಕ್ಕೇನು ಬೆಲೆಯಿದೆ ಎಂದು ಕೆ.ಪಿ.ನಂಜುಂಡಿ ಹೇಳಿದರು.