ಮಾತೃಪಕ್ಷಕ್ಕೆ ಮರಳಲು ಸಿದ್ದ; ಸ್ಪಂದನೆ ದೊರೆಯದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ : ಪುತ್ತಿಲ ಪರಿವಾರ

ಪುತ್ತೂರು: ಪುತ್ತಿಲ ಪರಿವಾರವನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಬಿಜೆಪಿ ನಾಯಕರಿಗೆ ಮೂರು ದಿನಗಳ ಗಡುವು ನೀಡಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ ಪುತ್ತಿಲ ಪರಿವಾರವು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದೆ ಎಂದು ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರದ ಸಮಾಲೋಚನೆ ಸಭೆಯಲ್ಲಿ ಘೋಷಿಸಲಾಗಿದೆ.

ಫೆ.5ರಂದು ಕೊಟೇಚಾ ಸಭಾಂಗಣದಲ್ಲಿ ನಡೆದ ಪುತ್ತಿಲ ಪರಿವಾರದ ಸಮಾಲೋಚನೆ ಸಭೆಯಲ್ಲಿ ಪುತ್ತಿಲ ಪರಿವಾರದ ಪರವಾಗಿ ಮಾತನಾಡಿದ ಶ್ರೀಕೃಷ್ಣ ಉಪಾಧ್ಯಾಯ, ಸಾಮಾನ್ಯ ಕಾರ್ಯಕರ್ತರಾಗಿ ಅರುಣ್‌ಕುಮಾರ್‌ ಬಿಜೆಪಿ ಸೇರಬೇಕು ಎನ್ನುವುದನ್ನು ಯಾವುದೇ ಕಾರ್ಯಕರ್ತರು ಒಪ್ಪುವುದಿಲ್ಲ. ಅರುಣ್‌ 35 ವರ್ಷಗಳಿಗೂ ಅಧಿಕ ಕಾಲದಿಂದ ಅಧಿಕಾರದ ಆಸೆ ಇಲ್ಲದೆ ಸಂಘಟನೆ, ಪಕ್ಷಕ್ಕಾಗಿ ದುಡಿದವರು, ಹಾಗಾಗಿ ಷರತ್ತು ಬದಿಗಿಟ್ಟು ಅವರಿಗೆ ಕಾರ್ಯಕರ್ತರ ಅಪೇಕ್ಷೆಯಂತೆ ಸ್ಥಾನಮಾನ ನೀಡಬೇಕು ಎಂದರು.

ಯಡಿಯೂರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮೊದಲಾದವರು ಬಿಜೆಪಿ ತೊರೆದು ಚುನಾವಣೆಗೆ ಸ್ಪರ್ಧಿಸಿದ್ದರು. ಅವರಿಗೆಲ್ಲ ಮತ್ತೆ ಅವಕಾಶ ಸಿಕ್ಕಿದೆ. ಯಡಿಯೂರಪ್ಪನವರ ಪುತ್ರನಿಗೆ ರಾಜ್ಯಾಧ್ಯಕ್ಷ ಹುದ್ದೆ ದೊರೆತಿದೆ. ಹಾಗಿರುವಾಗ ಅರುಣ್‌ ಪುತ್ತಿಲ ಮಾತ್ರ ಬರಬಾರದು ಅಂದರೆ ಏನರ್ಥ ಎಂದು ಶ್ರೀ ಕೃಷ್ಣ ಉಪಾಧ್ಯಾಯರು ಪ್ರಶ್ನಿಸಿದರು.

ಅರುಣ್‌ ಪುತ್ತಿಲ ಯಾರ ವಿರುದ್ಧವೂ ಅಗೌರವದಿಂದ ಮಾತನಾಡಿಲ್ಲ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾರು ಅಗೌರವದಿಂದ ಮಾತ ನಾಡಿದ್ದಾರೆ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಅರುಣ್‌ ಯಾರಿಂದಲೂ ಕ್ಷಮೆ ಕೇಳಬಾರದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅರುಣ್‌ ಪುತ್ತಿಲ ಮಾತನಾಡಿ, ಪುತ್ತಿಲ ಪರಿವಾರ ಮತ್ತು ಬಿಜೆಪಿ ಒಂದಾಗುವ ನಿಟ್ಟಿನಲ್ಲಿ ಎರಡು 3 ಬಾರಿ ಮಾತುಕತೆ ನಡೆದಿತ್ತು. ರಾಜ್ಯದ ನಾಯಕರು ಮನಸ್ಸು ಮಾಡಿದ್ದರೂ ಪುತ್ತೂರಿನ ಕೆಲವರು ವಿರೋಧಿಸುತ್ತಿದ್ದಾರೆ. ಅವರಿಗೆ ನರೇಂದ್ರ ಮೋದಿ ಹಾಗೂ ದೇಶದ ಹಿತಕ್ಕಿಂತ ಗೊಂದಲವೇ ಮುಖ್ಯವಾಗಿದೆ ಎಂದರು.

ನಾನು ಮಾತೃಪಕ್ಷಕ್ಕೆ ಬರಲು ಸಿದ್ಧ. ನನಗೆ ಅಧಿಕಾರದ ಆಸೆ ಇಲ್ಲ. ನನ್ನ ಜತೆಗಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸ್ಥಾನಮಾನ ನೀಡಬೇಕು ಎಂದ ಪುತ್ತಿಲ, ವಿಧಾನಸಭಾ ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಕೆಲವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಆರೋಪ ಮಾಡಿದವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಡೆಯಲ್ಲಿ ನಿಂತು ಈ ಮಾತನ್ನು ಹೇಳಲಿ ಎಂದು ಸವಾಲೆಸೆದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಿಂದ ಅರುಣ್‌ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್‌ ನೀಡಬೇಕು. ಒಂದೊಮ್ಮೆ ಬಿಜೆಪಿ ಸೇರ್ಪಡೆಗೆ ಅವಕಾಶ ಸಿಗದಿದ್ದರೆ ಪುತ್ತಿಲ ಪರಿವಾರದ ಮೂಲಕ ಅರುಣ್‌ ಕುಮಾರ್‌ ಲೋಕಸಭಾ ಚುನಾವಣೆಯ ಕಣಕ್ಕಿಳಿಯಬೇಕು ಎಂದು ಸಭೆಯಲ್ಲಿದ್ದ ಕಾರ್ಯಕರ್ತರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅರುಣ್‌, ಕಾರ್ಯಕರ್ತರ ಅಪೇಕ್ಷೆಯಂತೆ ನಡೆದುಕೊಳ್ಳುವೆ ಎಂದರು.

ಪುತ್ತಿಲ ಪರಿವಾರದ ಶಶಾಂಕ್‌ ಕೊಟೇಚಾ, ಪ್ರಸನ್ನ ಮಾರ್ಥ, ಉಮೇಶ್‌ ಕೋಡಿಬೈಲು, ಮನೀಶ್‌ ಕುಲಾಲ್‌, ಮಲ್ಲಿಕಾ ಪ್ರಸಾದ್‌, ಅನಿಲ್‌, ರಾಜೇಶ್‌ ಮೊದಲಾದವರಿದ್ದರು. ರವಿ ಕುಮಾರ್‌ ರೈ ಸ್ವಾಗತಿಸಿದರು. ನವೀನ್‌ ರೈ ಪಂಜಳ ನಿರೂಪಿಸಿದರು.