ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಪುತ್ತಿಗೆ ಶ್ರೀ

ಬೆಳ್ತಂಗಡಿ: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳು ಜ.11ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸ್ವಾಮೀಜಿಗಳನ್ನು ಧರ್ಮಸ್ಥಳ ಮಹಾದ್ವಾರದ ಬಳಿ ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.

ಶ್ರೀಗಳು ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

ಬಳಿಕ ಸ್ವಾಮೀಜಿಯವರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಕ್ಷೇತ್ರದ ಪರವಾಗಿ ಯತಿವರ್ಯರಿಂದ ಶ್ರೀಗಳ ಪಾದಪೂಜೆ ನೆರವೇರಿತು.

ಡಾ. ಹೆಗ್ಗಡೆ ಅವರು ಸ್ವಾಮೀಜಿಯವರನ್ನು ಗೌರವಿಸಿದರು. ಸ್ವಾಮೀಜಿಗಳು ಡಾ.ಹೆಗ್ಗಡೆ ಸಹಿತ ಕುಟುಂಬದವರನ್ನು ಪರ್ಯಾಯಕ್ಕೆ ಆಮಂತ್ರಣ ನೀಡಿ ಆಹ್ವಾನಿಸಿ ಗೌರವಿಸಿದರು.

ಶ್ರೀಗಳೊಂದಿಗೆ ಅವರ ಕಿರಿಯ ಸ್ವಾಮೀಜಿ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಹಾಜರಿದ್ದರು.

ಈ ಸಂದರ್ಭದಲ್ಲಿ ಹೇಮಾವತಿ ವಿ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.